01 February 2026 | Join group

ಮಂಗಳೂರು ನಗರದ ಹಲವೆಡೆ ಭಾರಿ ಮಳೆಗೆ ರಸ್ತೆಗಳು ಮುಳುಗಡೆ: ಮತ್ತೊಮ್ಮೆ ಕಡಲಿನಂತಾದ ಪಂಪ್‌ವೆಲ್‌

  • 14 Jun 2025 07:30:32 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 12 ರಿಂದ 15ರ ವರೆಗೆ ಅತೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಆ ಮೂಲಕ ರೆಡ್ ಅಲರ್ಟ್ ಕೂಡ ಘೋಷಿಸಿತ್ತು. ಆದರೆ ಕಳೆದ 2 ದಿನಗಳಲ್ಲಿ ಸ್ವಲ್ಪ ಮಟ್ಟಕ್ಕೆ ಸುರಿಯುತ್ತಿದ್ದ ಮಳೆ ಇಂದು ದಕ್ಷಿಣ ಕನ್ನಡದ ಕೆಲವೆಡೆ ಅತಿಯಾಗಿ ಸುರಿಯುತ್ತಿದೆ.

 

ಮಂಗಳೂರಿನಲ್ಲಿ ಸತತ ಮಳೆ ಬೀಳುತ್ತಿರುವುದರಿಂದ ನಗರದ ಹಲವೆಡೆ ಮುಳುಗಡೆಯಾಗಿದೆ. ವರುಣನ ಆರ್ಭಟ ಇಂದು ಜೂನ್ 14 ರ ಮದ್ಯಾಹ್ನದಿಂದ ಹೆಚ್ಚಾಗಿದ್ದು ಕರಾವಳಿಯ ಹಲವಾರು ಕಡೆ ಗಾಳಿ ಮಳೆ ಸುರಿಯುತ್ತಿದೆ.

 

ಏಕಾಏಕಿ ಸುರಿಯುತ್ತಿರುವ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದ್ದು, ಮಂಗಳೂರಿನಲ್ಲಿ ರಸ್ತೆಗಳ ಮೂಲಕ ನೀರು ಹರಿದು ಹೋಗುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

 

ಮತ್ತೊಮ್ಮೆ ಕಡಲಿನಂತಾದ ಪಂಪ್‌ವೆಲ್‌ ಜಂಕ್ಷನ್ ಮಹಾವೀರ ಸರ್ಕಲ್ ನ  ಓವರ್ ಬ್ರಿಡ್ಜ್ ಕೆಳಗಡೆ ಮಳೆಯ ನೀರು ಹರಿಯುತ್ತಿದ್ದು, ಕಡಲಿನಂತಾಗಿದೆ. ವಾಹನಗಳು ಮಳೆ ನೀರಿಗೆ ಸಿಕ್ಕಿಹಾಕಿಕೊಂಡಿದೆ. ಸಂಚಾರ ಅಸ್ತವ್ಯಸ್ತವಾಗಿದ್ದು, ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದೆ. ಪಂಪ್‌ವೆಲ್‌ ಮುಖ್ಯ ಜುಂಕ್ಷನ್ ನಲ್ಲಿ ಅತಿಯಾದ ನೀರು ತುಂಬಿದ್ದು, ನಾಲ್ಕು ಕಡೆಗಳಿಂದ ವಾಹನಗಳು ಸೇತುವೆ ಕೆಳಗಡೆ ಚಲಿಸಲಾಗದೆ, ಎಲ್ಲಾ ಕಡೆಗಳಲ್ಲೂ ದೊಡ್ಡ ಸಂಚಾರ ದಟ್ಟಣೆಯಾಗಿದೆ.

 

ಮಂಗಳೂರು ಪುರಸಭೆಯ ಮತ್ತು ಇನ್ನಿತರ ಸಂಬಂಧಿಸಿದ ಇಲಾಖೆಗಳಿಂದ ಕೆಟ್ಟ ನಿರ್ವಹಣೆಯ ಕಾರಣದಿಂದ ಈ ರೀತಿಯ ಅಸ್ತವ್ಯಸ್ತಗಳು ನಡೆಯುತ್ತಿರುವುದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜೂನ್ 17 ರ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.