ಮತ್ತೊಂದು ಹೆಲಿಕ್ಯಾಪ್ಟರ್ ಪತನ: 23 ತಿಂಗಳ ಮಗು, ಪೈಲಟ್ ಸೇರಿ 7 ಜನರ ದುರ್ಮರಣ

  • 15 Jun 2025 12:20:13 PM

ಉತ್ತರಖಂಡ: ವಿಶ್ವದಾದ್ಯಂತ ಅವಘಢಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇದೀಗ ಮತ್ತೊಂದು ಹೆಲಿಕ್ಯಾಪ್ಟರ್ ಪತನವಾದ ಸುದ್ದಿ ಉತ್ತರಾಖಂಡದ ಗೌರಿಕುಂಡ್ ನಿಂದ ಬಂದಿದೆ. ಇಡೀ ದೇಶ ಮಾತ್ರವಲ್ಲದೆ ವಿಶ್ವವೇ ಅಹ್ಮದಾಬಾದ್ ವಿಮಾನ ದುರಂತದ ಕರಾಳ ದಿನಗಳಲ್ಲಿ ಮುಳುಗಿರುವಾಗ ಮತ್ತೊಂದು ಅವಘಡ ಕೇಳಿದಾಗ ಜನರ ಮಾನಸಿಕ ಒತ್ತಡ ಹೆಚ್ಚಾಗದೇ ಇರಲು ಸಾಧ್ಯವಿಲ್ಲ.

 

ಕೇದಾರನಾಥದಿಂದ ಗೌರಿಕುಂಡ್ ಗೆ ತೆರಳಿರುವ ಹೆಲಿಕ್ಯಾಪ್ಟರ್ ಉತ್ತರಾಖಂಡದ ಗೌರಿಕುಂಡ್ ಪ್ರದೇಶದ ಬಳಿ ಪತನಗೊಂಡಿದ್ದು, ಹೆಲಿಕ್ಯಾಪ್ಟರ್ ನಲ್ಲಿದ್ದ 7 ಜನ ಮೃತಪಟ್ಟಿದ್ದಾರೆ. ದುರ್ದೈವವೆಂದರೆ, ಈ 7 ಜನರ ಪೈಕಿ ಒಂದು ಮಗು ಕೂಡ ಸೇರಿದೆ.

 

ಹೆಲಿಕ್ಯಾಪ್ಟರ್ ಪತನಕ್ಕೆ ಕಾರಣ

ಈ ಹೆಲಿಕ್ಯಾಪ್ಟರ್ ಇಂದು ಬೆಳಗ್ಗೆ ಕೇದಾರನಾಥದಿಂದ ಗೌರಿಕುಂಡ್ ಗೆ ಹೋಗುತ್ತಿರುವಾಗ ಜೂಗಿನಾರಾಯಣ ಮತ್ತು ಗೌರಿಕುಂಡ್ ನಡುವೆ ಸಂಪರ್ಕ ಕಡಿತಗೊಂಡು ಈ ಘಟನೆ ನಡೆದಿದೆ. ಈ ಘಟನೆ ಬೆಳಿಗ್ಗೆ 5:30 ರ ಸುಮಾರಿಗೆ ನಡೆದಿದೆ. ಹವಾಮಾನ ವೈಫಲ್ಯದಿಂದ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಎನ್‌ಡಿಆರ್‌ಎಫ್ ತಂಡ ಧಾವಿಸಿದ್ದು, ರಕ್ಷಣಾ ಕಾರ್ಯಕ್ಕೆ ಕೆಟ್ಟ ಹವಾಮಾನದಿಂದ ತೊಂದರೆಯಾಗುತ್ತಿದೆ. ಹೆಲಿಕ್ಯಾಪ್ಟರ್ ಅವಶೇಷಗಳು ಚದುರಿಹೋಗಿದೆ.

 

ಎಲ್ಲಿಂದ ಪ್ರಯಾಣ ಮತ್ತು ಎಷ್ಟು ಜನರ ಮರಣ?

ಆರ್ಯನ್ ಏವಿಯೇಷನ್ ಕಂಪನಿಗೆ ಸೇರಿದ ಈ ಹೆಲಿಕ್ಯಾಪ್ಟರ್ ಕೇದಾರನಾಥ್ ನಿಂದ ಗೌರಿಕುಂಡ್ ಗೆ ಪ್ರಯಾಣ ಬೆಳೆಸಿತ್ತು. ಪೈಲಟ್ ಮತ್ತು 23 ತಿಂಗಳ ಮಗು ಸೇರಿದಂತೆ ಹೆಲಿಕ್ಯಾಪ್ಟರ್ ನಲ್ಲಿ 7 ಜನ ಪ್ರಯಾಣಿಸುತ್ತಿದ್ದರು. ಗೌರಿಕುಂಡ್ ನಲ್ಲಿ ಹುಲ್ಲು ಕಡಿಯಲು ಬಂದಿದ್ದ ನೇಪಾಳಿ ಮೂಲದ ಮಹಿಳೆಯರು ಅಪಘಾತದ ಬಗ್ಗೆ ಮಾಹಿತಿ ನೀಡಿದ್ದರು.

 

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಂತಾಪ ಸೂಚಿಸಿದ್ದು, ಕೆಲ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ.