Biography of Appu : ಅಕ್ಟೋಬರ್ 29, 2021 ರಂದು , ಅಭಿಮಾನಿಗಳ ಹೃದಯವನ್ನೇ ತುಂಡುಮಾಡಿದಂತಹ ಘಟನೆ, ನಟ ಪುನೀತ್ ರಾಜ್ಕುಮಾರ್ ಅವರ ಅಕಾಲಿಕ ನಿಧನ. ಅವರ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ರಾಜ್ಯವಂತೂ ಶೋಕಸಾಗರದಲ್ಲಿ ಮುಳುಗಿತು. ಕೇವಲ ಕರ್ನಾಟಕವೇ ಅಲ್ಲ, ಸಂಪೂರ್ಣ ದೇಶದ ಸಿನಿಪ್ರೇಮಿಗಳು, ಗಣ್ಯರು, ರಾಜಕೀಯ ಮುಖಂಡರು ಸಂತಾಪ ವ್ಯಕ್ತಪಡಿಸಿದರು.
ಸಾವಿರಾರು ಅಭಿಮಾನಿಗಳು ಬೀದಿಗಳಲ್ಲಿ ಕಣ್ಣೀರಿಡುತ್ತಾ, ಅವರ ಅಂತಿಮ ದರ್ಶನ ಪಡೆಯಲು ನೆರೆದರು. ಸರ್ಕಾರ ಅವರ ಗೌರವಾರ್ಥ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವದೊಂದಿಗೆ ನಡೆಸಿತು. ಕನ್ನಡ ಚಿತ್ರರಂಗ ಒಬ್ಬ ದಿಗ್ಗಜನನ್ನು ಕಳೆದುಕೊಂಡ ನೋವಿನಲ್ಲಿ ಮುಳುಗಿತ್ತು. ಪ್ರತಿ ಮನೆಯಲ್ಲೂ ಆ ದೃಶ್ಯ ಕಂಡು ಪ್ರತಿಯೊಬ್ಬರ ಕಣ್ಣಲ್ಲಿ ನೀರುಳಿಯುತ್ತಿತ್ತು.
‘ಅಪ್ಪು ಅಂದರೆ ಸರಳ, ಸ್ನೇಹಮಯಿ, ಮೇರು ವ್ಯಕ್ತಿತ್ವ, ಅವರು ನಟಿಸಿದ ಸಿನಿಮಾಗಳು, ಮಾಡಿದ ಸಾಮಾಜಿಕ ಕಾರ್ಯಗಳು ಅಪ್ಪುವನ್ನು ಯಾವಾಗಲು ಅಮರವಾಗಿರಿಸುತ್ತದೆ. ಅಶ್ವಿನಿ ಪುನೀತ್ ರಾಜಕುಮಾರ್ ಈಗ ಅಪ್ಪುರವರ ಜೀವನ ಚರಿತ್ರೆ ಹೊರಗೆ ತರುತ್ತಿದ್ದಾರೆ. ಅಪ್ಪುವಿನ ಬಗ್ಗೆ ಹಲವಾರು ಸಂದರ್ಶನಗಳು ಇವೆ, ಬಹಳಷ್ಟು ಜನ ಅವರ ಬಗ್ಗೆ ಮಾತಾಡಿದ್ದಾರೆ, ಸಾಮಾಜಿಕ ತಾಣಗಳಲ್ಲಿ ಬರೆದುಕೊಂಡಿದ್ದಾರೆ. ಎಷ್ಟೇ ಆದರೂ ಅಪ್ಪು ವ್ಯಕ್ತಿತ್ವದ ಬಗ್ಗೆ ಹೇಳಲು ಬಾಕಿ ಇರುವುದರಿಂದ ಅವರ ಪತ್ನಿ ಅಪ್ಪುವಿನ ಬಯೋಗ್ರಾಫಿ ( ಜೀವನ ಚರಿತ್ರೆ ) ಬುಕ್ ಬಿಡುಗಡೆ ಮಾಡಲಿದ್ದಾರೆ.
ಅಪ್ಪು ಅವರ ಬಯೋಗ್ರಾಫಿಯನ್ನು ಬನವಾಸಿ ಮತ್ತು ಅಶ್ವಿನಿ ಪುನೀತ್ ರಾಜ್ಕುಮಾರ್ ಒಟ್ಟಿಗೆ ಸೇರಿ ಬರೆಯುತ್ತಿದ್ದಾರೆ. ಇದರಲ್ಲಿ ಇರುವ ಎಲ್ಲಾ ಲೇಖನವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಬನವಾಸಿ ಜಂಟಿಯಾಗಿ ಸಂಪಾದಿಸಿದ್ದಾರೆ. ಈ ಬಯೋಗ್ರಾಫಿಯಲ್ಲಿ ಸುಮಾರು 225 ಮಂದಿ ನಟರು, ತಂತ್ರಜ್ಞರು ಮತ್ತು ಇನ್ನಿತರ ಸಂಬಂಧಿಸಿದವರು ಮಾತನಾಡಿದ್ದಾರೆ ಮತ್ತು ಬರೆದಿದ್ದಾರೆ.
ಅಪ್ಪು ಅವರ ಜೀವನದಲ್ಲಿ ನಡೆದ ಹಲವಾರು ಘಟನೆಗಳು, ಅವರು ಆಡಿದ ಮಾತುಗಳು, ಅವರ ಸಾಧನೆ ಇನ್ನೂ ಹಲವು ವಿಷಯಗಳನ್ನು ಪುಸ್ತಕ ಒಳಗೊಂಡಿರಲಿದೆ. ಅಪ್ಪು ಅವರ ಬಾಲ್ಯದಿಂದ ಆರಂಭಿಸಿ ಕೊನೆಯ ಕ್ಷಣದ ವರೆಗಿನ ಮಾಹಿತಿ ಈ ಪುಸ್ತಕದಲ್ಲಿ ಇರಲಿದೆ. ಕಳೆದ ಎರಡು ವರುಷಗಳಿಂದ ಈ ಪುಸ್ತಕದ ಮೇಲೆ ಕೆಲಸ ಮಾಡುತ್ತಿದ್ದಾರೆ. ತಾಯಿಗೆ ಸಹಾಯ ಮಾಡುವ ಸಲುವಾಗಿ ಅಪ್ಪುವಿನ ಮಕ್ಕಳಿಬ್ಬರೂ ಸಹ ಕೆಲಸ ಮಾಡುತ್ತಿದ್ದಾರಂತೆ.
‘ಅಂಜನೀಪುತ್ರ’ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ನಲ್ಲಿ ತೆಗೆದ ಅಪರೂಪದ ಚಿತ್ರವನ್ನು ಈ ಪುಸ್ತಕದ ಮುಖಪುಟಕ್ಕೆ ಬಳಸಲಾಗಿದೆಯಂತೆ. ಹಲವು ಟಾಪ್ ಸಿನಿ ತಾರೆಗಳು ಈ ಪುಸ್ತಕಕ್ಕಾಗಿ ಲೇಖನ ಒದಗಿಸಿದ್ದಾರೆ. ಅಪ್ಪುವಿನ ಸಾಧನೆ, ಸಿನಿ ರಂಗಕ್ಕೆ ಕೊಟ್ಟ ಕೊಡುಗೆ, ತೆರೆಮರೆಯಲ್ಲಿ ಮಾಡಿದ ಸಾಮಾಜಿಕ ಕೆಲಸ ಕಾರ್ಯಗಳು ಹಾಗೂ ಹಲವಾರು ವಿಷಯ ಸಂಗತಿಗಳು ಈ ಪುಸ್ತಕದಲ್ಲಿ ಮೂಡಿಬರಲಿದೆ. ಅಪ್ಪು ಬಯೋಗ್ರಾಫಿ ಸದ್ಯದಲ್ಲೇ ಬಿಡುಗಡೆಯಾಗಲಿದೆಯಂತೆ.