ಎಲ್ಲಾ ಹತ್ತು ರೂಪಾಯಿ ನಾಣ್ಯಗಳು ಕಾನೂನುಬದ್ದವಾಗಿದೆ : ಸ್ವೀಕರಿಸಲು ತಿರಸ್ಕಾರ ಮಾಡಿದವರಿಗೆ ಕಾನೂನು ಕ್ರಮ

  • 24 Mar 2025 02:05:58 PM

ಹತ್ತು ರೂಪಾಯಿ ನಾಣ್ಯಗಳ ಗೊಂದಲ ಇನ್ನೂ ಮುಂದುವರಿದಿದೆ. ಭಾರತದಾದ್ಯಂತ ಒಟ್ಟು 14 ವಿಧದ 10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿದೆ. ಅನೇಕ ಅಂಗಡಿಗಳು ಮತ್ತು ಇನ್ನಿತರ ವ್ಯಾಪಾರಿಗಳು, ತಪ್ಪು ಕಲ್ಪನೆಗಳಿಂದಾಗಿ ಅವುಗಳನ್ನು ಸ್ವೀಕರಿಸಲು ನಿರಾಕರಿಸುವ ಉದಾಹರಣೆಗಳು ಬಹಳಷ್ಟಿದೆ.

 

ಚಲಾವಣೆಯಲ್ಲಿರುವ ಎಲ್ಲಾ 14 ನಾಣ್ಯಗಳು ಕಾನೂನುಬದ್ಧವಾಗಿ ಉಳಿದಿವೆ ಮತ್ತು ವಹಿವಾಟುಗಳಿಗೆ ಸ್ವೀಕರಿಸಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಸಾರ್ವಜನಿಕ ಕಳವಳಗಳನ್ನು ಪರಿಹರಿಸಲು, ಆರ್‌ಬಿಐ ಅನೇಕ ಸ್ಪಷ್ಟೀಕರಣಗಳನ್ನು ನೀಡುತ್ತಲೇ ಬಂದಿದೆ ಮತ್ತು ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಜಾಗೃತಿ ಅಭಿಯಾನವನ್ನು ಕೂಡ ಪ್ರಾರಂಭಿಸಿದೆ.

 

ಸಾರ್ವಜನಿಕರಿಗೆ ಸಹಾಯ ಮಾಡಲು, ಆರ್‌ಬಿಐ ಟೋಲ್-ಫ್ರೀ ಸಹಾಯವಾಣಿ (14440) ಅನ್ನು ಪರಿಚಯಿಸಿದೆ, ಅಲ್ಲಿ ವ್ಯಕ್ತಿಗಳು 10 ರೂ. ನಾಣ್ಯಗಳ ಬಗ್ಗೆ ವಿವರಗಳನ್ನು ಪರಿಶೀಲಿಸಬಹುದು. 10 ರೂ. ನಾಣ್ಯಗಳನ್ನು ನಿರಾಕರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಬಿಐ ತಿಳಿಸಿದೆ.

 

ಕೆಲವರು ರೂಪಾಯಿ ಚಿಹ್ನೆಯನ್ನು ಒಂದಿದ ನಾಣ್ಯ ಮಾತ್ರ ನಿಜವಾಗಿದೆ ಎಂದು ನಂಬಿದ್ದಾರೆ. ಆದರೆ ಆರ್‌ಬಿಐ ಪ್ರಕಾರ ಎಲ್ಲಾ 14 ನಾಣ್ಯಗಳು ಅಧಿಕೃತವಾಗಿದೆ ಮತ್ತು ಯಾವುದೇ ಮುಲಾಜಿಲ್ಲದೆ ಸ್ವೀಕರಿಸಬಹುದು ಎಂದು ತಿಳಿಸಿದೆ.