ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯಲ್ಲಿರುವ 'ಚಿಲ್ಕೂರ್ ಬಾಲಾಜಿ' ಭಾರಿ ಹೆಸರುವಾಸಿ. ನಿಮ್ಮ ಆಸೆಗಳನ್ನು ಈಡೇರಿಸುವ 'ಚಿಲ್ಕೂರ್ ಬಾಲಾಜಿ' ದೇವಾಲಯವನ್ನು ಜನ 'ವೀಸಾ ಬಾಲಾಜಿ' ದೇವಾಲಯ ಎಂದು ಕರೆಯುತ್ತಾರೆ. ಸರಿಸುಮಾರು 500 ವರುಷಗಳಷ್ಟು ಹಳೆಯದಾದ ದೇವಾಲಯವಾಗಿದ್ದು, ಇದು ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ.
ಏನಿದು ವೀಸಾ ಬಾಲಾಜಿ ದೇವಸ್ಥಾನದ ವಿಶೇಷತೆ ?
ಚಿಲ್ಕೂರ್ ಬಾಲಾಜಿ ಅಂದರೆ ವೀಸಾ ಬಾಲಾಜಿ ವಿದೇಶಗಳಿಗೆ ಪ್ರಯಾಣಿಸಲು ಬಯಸುವ ಆಕಾಂಕ್ಷಿಗಳಿಗೆ ಬಹಳ ಪ್ರಾಮುಖ್ಯ ಪಡೆದ ದೇವಸ್ಥಾನವಾಗಿದೆ. ವೀಸಾ ಸಂಬಂಧಿತ ಪವಾಡಗಳಿಗೆ ಜಾಗತಿಕವಾಗಿ ಹೆಸರುವಾಸಿಯಾಗಿದೆ. ಈ ದೇವಸ್ಥಾನದ ವಿಶೇಷತೆ ಏನೆಂದರೆ, ಇಲ್ಲಿ ನಿಮಗೆ ಕಾಣಿಕೆ ಡಬ್ಬಿ ಕಾಣಲು ಸಿಗುವುದಿಲ್ಲ. ಅದು ಮಾತ್ರವಲ್ಲದೆ ವಿಐಪಿ ಸಾಲುಗಳು ಇರಲ್ಲ, ಯಾವುದೇ ಪೂಜಾ ಪುರಸ್ಕಾರ ಮಾಡುವವರು ಇಂತಿಷ್ಟು ಹಣ ಕೊಡಬೇಕೆಂದಿಲ್ಲ. ನಿಮ್ಮ ಪ್ರಾರ್ಥನೆ ಮತ್ತು ನಂಬಿಕೆ ಮಾತ್ರ ಕೆಲಸ ಮಾಡುತ್ತದೆ ಎನ್ನುತ್ತಾರೆ ಇಲ್ಲಿನ ಭಕ್ತಾದಿಗಳು.
ದೇವರ ಪ್ರಾರ್ಥನೆ ಮಾಡಿ ಒಲಿಯುವ ವಿಧಾನ ಹೇಗೆ ?
ನಿಮ್ಮ ಆಸೆ, ಬಯಕೆಗಳನ್ನು ನೆನೆಯುತ್ತ 11 ಬಾರಿ ದೇವಸ್ಥಾನಕ್ಕೆ ಸುತ್ತು ಬರಬೇಕು. ಅದು ನೀವು ನಿರೀಕ್ಷಿಸುತ್ತಿರುವ ವಿದೇಶಿ ಪ್ರಯಾಣ ಸಂಬಂಧಪಟ್ಟ ವೀಸಾ ಇರಬಹುದು ಅಥವಾ ನೀವು ಕನಸು ಕಾಣುತ್ತಿರುವ ಯಾವುದೇ ವಿಷಯವಾಗಿರಬಹುದು. ವೀಸಾ ಬಾಲಾಜಿ ದೇವರ ಅನುಗ್ರಹದಿಂದ ನಿಮ್ಮ ಕನಸು ನನಸಾದ ನಂತರ ಮತ್ತೊಮ್ಮೆ ದೇವಸ್ಥಾನಕ್ಕೆ ಭೇಟಿ ಕೊಟ್ಟು 108 ಸಲ ಅದೇ ದೇವಸ್ಥಾನಕ್ಕೆ ಸುತ್ತು ಬಂದು ದೇವರಿಗೆ ಪ್ರಾರ್ಥಿಸಬೇಕೆಂಬುವುದು ಅಲ್ಲಿನ ನಿಯಮ. ಇದೇ ನೀವು ಮಾಡಬೇಕಾದ ಬಹು ದೊಡ್ಡ ಕಾಣಿಕೆ ಎನ್ನುತ್ತಾರೆ ಅಲ್ಲಿನ ಭಕ್ತಾದಿಗಳು. ಅದೇ ಕಾರಣಕ್ಕೆ ಯಾವುದೇ ಕಾಣಿಕೆ ಹುಂಡಿ ಅಥವಾ ಇನ್ನಿತರ ಸೇವೆಗಳು ಈ ದೇವಸ್ಥಾನದಲ್ಲಿ ಕಾಣಸಿಗುವುದಿಲ್ಲ.
ನೀವೂ ನಿಮ್ಮ ವೀಸಾಕ್ಕಾಗಿ ಕಾಯುತ್ತಿದ್ದೀರಾ ಅಥವಾ ನಿಮ್ಮ ಕೈಗೆಟಕದ ಕನಸನ್ನು ಬೆನ್ನಟ್ಟುತ್ತಿದ್ದೀರಾ? ಮತ್ತೆ ಯಾಕೆ ತಡ..ವೀಸಾ ಬಾಲಾಜಿಯ ದರ್ಶನ ಪಡೆಯಿರಿ, ನಿಮ್ಮ ಆಸೆಗಳನ್ನು ಪ್ರಾರ್ಥನೆ ಮೂಲಕ ವ್ಯಕ್ತಪಡಿಸಿ, ನಿಮ್ಮ ಕನಸುಗಳನ್ನು ಚಿಲ್ಕೂರ್ ಬಾಲಾಜಿ ಅಂದರೆ ವೀಸಾ ಬಾಲಾಜಿ ನನಸಾಗಲಿದ್ದಾನೆ.