ಬಂಟ್ವಾಳ: ತಾಲೂಕಿನ ಗೋಳ್ತಮಜಲು ಗ್ರಾಮದ ಕೊಳಕೀರು ಶ್ರೀ ಧೂಮಾವತಿ ಬಂಟ ದೈವಸ್ಥಾನದಲ್ಲಿ ನವೀಕರಿಸಲಾದ ಭಂಡಾರಮನೆಯ ಪುನರ್ ಪ್ರತಿಷ್ಠಾ ಕಲಶಾಭಿಷೇಕೋತ್ಸವ ಸೆಪ್ಟೆಂಬರ್ 19ರಂದು ನಡೆಯಲಿದೆ.
ವಿಶೇಷವಾಗಿ ವಾಸ್ತುಶಿಲ್ಪದ ಮಾದರಿಯಲ್ಲಿ ಪುನರ್ ನಿರ್ಮಾಣಗೊಂಡಿರುವ ಭಂಡಾರಮನೆಯ ಪುನರ್ ಪ್ರತಿಷ್ಠಾ ಕಾರ್ಯಕ್ರಮವನ್ನು ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿಸಲಾಗುತ್ತದೆ. ಶನಿವಾರ ಬೆಳಗ್ಗೆ 10.15ಕ್ಕೆ ತುಲಾ ಲಗ್ನದ ಶುಭ ಮುಹೂರ್ತದಲ್ಲಿ ಕಲಶಾಭಿಷೇಕ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ.

ವೇದಮೂರ್ತಿ ಶ್ರೀ ಸುಧೀರ್ ಭಟ್ ಪಡುಬಿದ್ರಿ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ದೈವಸ್ಥಾನದ ಪುನರ್ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಹಾಗೂ ದೈವಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೈವಸ್ಥಾನದ ವತಿಯಿಂದ ಮನವಿ ಮಾಡಲಾಗಿದೆ. ಕುಟುಂಬ ಸಮೇತರಾಗಿ ಆಗಮಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೈವದ ಪ್ರಸಾದ ಹಾಗೂ ಆಶೀರ್ವಾದ ಪಡೆಯುವಂತೆ ಕೊಳಕೀರು ಮನೆತನ, ಜೀರ್ಣೋದ್ಧಾರ ಸಮಿತಿ ಹಾಗೂ ಊರಿನ ಸಮಸ್ತರು ವಿನಂತಿಸಿದ್ದಾರೆ.





