ಬಂಟ್ವಾಳ, ಕಡೇಶಿವಾಲಯ: ಬಂಟ್ವಾಳ ತಾಲೂಕಿನ ಕಡೇಶಿವಾಲಯದ ಗ್ರಾಮದ ಪೆರ್ಲಾಪಿನಲ್ಲಿ 68 ಲಕ್ಷ ರೂ. ವೆಚ್ಚದಲ್ಲಿ ಹೊಸದಾಗಿ ನಿರ್ಮಾಣವಾದ ಗ್ರಾಮ ಪಂಚಾಯತ್ ಕಚೇರಿ ಹಾಗೂ ಸಂಭಾಗಣ ಕಟ್ಟಡ 'ಪ್ರಗತಿ ಸೌಧದ' ಲೋಕಾರ್ಪಣ ಕಾರ್ಯಕ್ರಮ ಜೂ.20 ರಂದು ಗಣ್ಯರ ಉಪಸ್ಥಿತಿಯಲ್ಲಿ ನೆರವೇರಿತು.
ಸಂಸದರು ಮತ್ತು ಶಾಸಕರ ಉಪಸ್ಥಿತಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಪಂಚಾಯತ್ ಕಚೇರಿ ಮತ್ತು ಸಂಭಾಗಣವನ್ನು ರಿಮೋಟ್ ಕಂಟ್ರೋಲ್ ಮೂಲಕ ಲೋಕಾರ್ಪಣೆಗೊಳಿಸಿ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ದಕ್ಷಿಣ ಕನ್ನಡ ಸಂಸದರ ಕ್ಯಾ. ಬೃಜೇಶ್ ಚೌಟ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದರು. ಕಾರ್ಯಕ್ರಮದ ಉದ್ಘಾಟನಾ ಅಧ್ಯಕ್ಷತೆಯನ್ನು ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷೆ ಜಯಂತಿ ವಹಿಸಿದ್ದರು.
ವೇದಿಕೆಯಲ್ಲಿ ಗ್ರಾ.ಪಂ ಅಧ್ಯಕ್ಷೆ ಭಾರತಿ ಎಸ್ ರಾವ್, ಉಪಾಧ್ಯಕ್ಷ ಸುರೇಶ್ ಪೂಜಾರಿ ಕನ್ನೊಟ್ಟು, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಬ್ಬಂದಿಗಳಿಗೆ ಸನ್ಮಾನ
ಕಟ್ಟಡ ನಿರ್ಮಾಣದ ಗುತ್ತಿಗೆ ವಹಿಸಿದ್ದ ಪ್ರತಾಪ್ ಶೆಟ್ಟಿ ಪಾಂಡಿಬೆಟ್ಟುರವರಿಗೆ ಸನ್ಮಾನಿಸಲಾಯಿತು. ಕರವಸೂಲಿಗಾರ ಮತ್ತು ಪಂಚಾಯತ್ ಕಾರ್ಯದರ್ಶಿ ಚಂದಪ್ಪ ನಾಯ್ಕರಿಗೂ ಸನ್ಮಾನಿಸಲಾಗಿದೆ.
ಕಟ್ಟಡ ಕಾರ್ಯಕ್ಕೆ ದುಡಿದವರಿಗೆ ಗೌರವ
ಕಟ್ಟಡ ನಿರ್ಮಾಣಕ್ಕೆ ದುಡಿದ ನಾಗೇಶ್ ಜೆ.ಇ, ನರೇಗಾ ಇಂಜಿನಿಯರ್ ಆತಿಶ್, ಇಂಟೀರಿಯರ್ ಡಿಸೈನರ್ ಸುಮತ್, ಎಲೆಕ್ಟ್ರಿಷಿಯನ್ ಭುವನೇಶ್, ಬಿ ಕೆ ಮಮತಾ, ಸುಧಾ ಅವರುಗಳನ್ನು ಗೌರವಿಸಲಾಗಿದೆ.
ಕಾರ್ಯಕ್ರಮವನ್ನು ಪಂ. ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಸ್ವಾಗತಿಸಿ ಪ್ರಸ್ತಾಪಿಸಿದರು. ಗ್ರಾ.ಪಂ ಮಾಜಿ ಅಧ್ಯಕ್ಷ ಸುರೇಶ್ ಬನಾರಿ ವಂದಿಸಿದರು. ಮಲ್ಲಿಕಾ ಕಡೇಶಿವಾಲಯ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ನೂತನ ಕಚೇರಿಯಲ್ಲಿ ಫಲಾನುಭವಿ ಚಂದ್ರಹಾಸ ಶೆಟ್ಟಿ ಅವರಿಗೆ ವ್ಯಾಪಾರ ಪರವಾಣಿಗೆಯನ್ನು ನೀಡಿ ಚಾಲನೆ ನೀಡಲಾಯಿತು.
ಹೊಸದಾಗಿ ನಿರ್ಮಾಣವಾದ ಗ್ರಾಮ ಪಂಚಾಯತ್ ಕಚೇರಿ ಹಾಗೂ ಸಂಭಾಗಣ ಕಟ್ಟಡ ಪ್ರಗತಿ ಸೌಧದ ಲೋಕಾರ್ಪಣ ಕಾರ್ಯಕ್ರಮದಲ್ಲಿ ಪಂಚಾಯತ್ ನ ಸರ್ವ ಸದಸ್ಯರು, ಮಾಜಿ ಸದಸ್ಯರುಗಳು, ಇತರ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಕಡೇಶಿವಾಲಯ ಶಾಲೆಯ ಶಿಕ್ಷಕ ವೃಂದ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು, ಮಾತೃ ಸಂಜೀವಿನಿ ಒಕ್ಕೂಟದ ಸದಸ್ಯರು, ಕಡೇಶಿವಾಲಯ ಸೇವಾ ಸರಕಾರಿ ಸಂಘದ ಸದಸ್ಯರು ಮತ್ತು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.