ಸುರತ್ಕಲ್: ಸಮೀಪದ ಸೂರಿಂಜೆ ಗ್ರಾಮದಲ್ಲಿ ವಾಲಿಬಾಲ್ ಆಟವಾಡುತ್ತಿದ್ದ ವೇಳೆ 15 ವರ್ಷದ ವಿದ್ಯಾರ್ಥಿಯೊಬ್ಬ ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದುರ್ಘಟನೆ ಬುಧವಾರ ಸಂಜೆ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಸೂರಿಂಜೆ ನಿವಾಸಿ ಮಾಧವ ಅಮೀನ್ ಅವರ ಪುತ್ರ ಲಿಖಿತ್ ಅಮೀನ್ (15) ಎಂದು ಗುರುತಿಸಲಾಗಿದೆ. ಅವರು ಸೂರಿಂಜೆ ಕೋಟೆ ಬೊಳ್ಳಾರು ಸರ್ಕಾರಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಬುಧವಾರ ಸಂಜೆ ಸೂರಿಂಜೆ ಮೈದಾನದಲ್ಲಿ ಸ್ನೇಹಿತರೊಂದಿಗೆ ವಾಲಿಬಾಲ್ ಆಡುತ್ತಿದ್ದ ಸಂದರ್ಭದಲ್ಲಿ ಲಿಖಿತ್ ಏಕಾಏಕಿ ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ಶಾಲೆಯ ಶಿಕ್ಷಕರು ಹಾಗೂ ಸ್ಥಳೀಯರು ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಿದರು.
ಆದರೆ ವೈದ್ಯರ ಎಲ್ಲಾ ಪ್ರಯತ್ನಗಳ ನಡುವೆಯೂ ಬಾಲಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಘಟನೆ ಸ್ಥಳೀಯರಲ್ಲಿ ದುಃಖದ ವಾತಾವರಣ ಮೂಡಿಸಿದ್ದು, ವಿದ್ಯಾರ್ಥಿಯ ಅಕಾಲಿಕ ನಿಧನಕ್ಕೆ ಶಾಲಾ ಶಿಕ್ಷಕರು, ಸಹಪಾಠಿಗಳು ಹಾಗೂ ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.





