ಉಪ್ಪಿನಂಗಡಿ: ಸಾರ್ವಜನಿಕರಿಗೆ ಸೇವೆ ನೀಡುವಲ್ಲಿ ವಿಳಂಬ, ಲಂಚಕ್ಕೆ ಬೇಡಿಕೆ ಇಟ್ಟಿರುವುದು, ಭ್ರಷ್ಟಾಚಾರದ ಆರೋಪ, ಸಾರ್ವಜನಿಕರಿಗೆ ಬೆದರಿಕೆ ಹಾಗೂ ಅನುಚಿತ ವರ್ತನೆ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಆರ್ಯಾಪು ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ (PDO) ವಿಲೈಡ್ ಲಾರೆನ್ಸ್ ರೊಡ್ರಿಗಸ್ ಅವರನ್ನು ಅಮಾನತುಗೊಳಿಸಲಾಗಿದೆ.
ಈ ಹಿಂದೆ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನ ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಅವರು, ಪ್ರಸ್ತುತ ಆರ್ಯಾಪು ಗ್ರಾಮ ಪಂಚಾಯತ್‌ನಲ್ಲಿ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನರವಾಡೆ ವಿನಾಯಕ ಕಾರಭಾರಿ ಅವರು ಸೆಪ್ಟೆಂಬರ್ 22ರಂದು ಅಮಾನತು ಆದೇಶ ಹೊರಡಿಸಿದ್ದಾರೆ.
ಆರೋಪಗಳಿಗೆ ಸಂಬಂಧಿಸಿದ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ, ಆದೇಶ ಹೊರಡಿಸಿದ ದಿನದಿಂದಲೇ ಅಮಾನತು ಜಾರಿಗೆ ಬರುವಂತೆ ಸೂಚಿಸಲಾಗಿದೆ.





