24 September 2026 |

ಬಂಟ್ವಾಳ: ರಮಾನಾಥ ರೈ ಕಾರು ಅಪಘಾತದ ಕುರಿತು ಅವಹೇಳನಕಾರಿ ಸಂದೇಶ; ಪ್ರಕರಣ ದಾಖಲು

  • 24 Sep 2026 10:56:36 AM

ಬಂಟ್ವಾಳ: ಮಾಜಿ ಸಚಿವ ಬಿ. ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾದ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಬೆದರಿಕೆ ರೀತಿಯ ಸಂದೇಶ ಪ್ರಕಟಿಸಿದ ಆರೋಪದ ಮೇಲೆ ಪ್ರಭಾಕರ ಹೆಗ್ಡೆ ಎಂಬವರ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ. 130/2026ರಂತೆ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಕಲಂ 351(2) ಮತ್ತು 352ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಟ್ವಾಳ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದಾರ್ (62) ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

 

ಸೆಪ್ಟೆಂಬರ್ 20ರಂದು ರಮಾನಾಥ ರೈ ಅವರು ಪ್ರಯಾಣಿಸುತ್ತಿದ್ದ ಕಾರು ಕಾರ್ಕಳ ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು ಶ್ರೀರಾಮ ಮಂದಿರದ ಡಿವೈಡರ್ ಕ್ರಾಸ್ ಬಳಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ರಮಾನಾಥ ರೈ ಸೇರಿದಂತೆ ಅವರ ಆಪ್ತ ಸಹಾಯಕರು, ಅಂಗರಕ್ಷಕರು ಮತ್ತು ಕಾರು ಚಾಲಕರಿಗೆ ಗಾಯಗಳಾಗಿದ್ದು, ಮಂಗಳೂರಿನ ಯೆನೆಪೊಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

 

ಅಪಘಾತದ ದೃಶ್ಯಗಳನ್ನು ಯಾರೋ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ಪ್ರಭಾಕರ ಹೆಗ್ಡೆ ಅವರು ಅವಹೇಳನಕಾರಿ ಹಾಗೂ ಬೆದರಿಕೆ ಒಡ್ಡುವ ರೀತಿಯ ಸಂದೇಶ ಪ್ರಕಟಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನಿಂದನಾತ್ಮಕ ಭಾಷೆ ಬಳಸಿ ಬೆದರಿಕೆ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರುದಾರರು ಮನವಿ ಮಾಡಿದ್ದಾರೆ.

 

ಮಾನ್ಯ ನ್ಯಾಯಾಲಯದ ಡಿಸ್ ನಂ. 845/2026ಕ್ಕೆ ಸಂಬಂಧಿಸಿದಂತೆ ಎಂ.ಪಿ.ಸಿ. 2319ರ ಮೂಲಕ ಬಂದ ದೂರನ್ನು ಸ್ವೀಕರಿಸಿದ ಬಳಿಕ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.