ಬಿ.ಸಿ. ರೋಡ್: ರಾಷ್ಟ್ರೀಯ ಹೆದ್ದಾರಿಯ ಬಿ.ಸಿ. ರೋಡ್ ಸರ್ಕಲ್ ಸಮೀಪ ಟಿಪ್ಪರ್ ಲಾರಿ ಮತ್ತು ಆಕ್ಟಿವಾ ದ್ವಿಚಕ್ರ ವಾಹನ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಪಾಣೆಮಂಗಳೂರು ಹೊರವಲಯದ ಮರ್ದೋಳಿ ನಿವಾಸಿಗಳಾದ ಯಶವಂತ್ ಹಾಗೂ ದಯಾನಂದ ಎಂದು ಗುರುತಿಸಲಾಗಿದೆ.
ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಟಿಪ್ಪರ್ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಆಕ್ಟಿವಾ ಸವಾರರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗಳಿಗೆ ಒಳಗಾಗಿದ್ದಾರೆ.
ಅಪಘಾತದ ಬಳಿಕ ಇಬ್ಬರೂ ರಸ್ತೆಯಲ್ಲೇ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿದ್ದು, ಅವರಲ್ಲಿ ಒಬ್ಬರ ಆರೋಗ್ಯ ಸ್ಥಿತಿ ಆತಂಕಕಾರಿ ಎಂದು ತಿಳಿದುಬಂದಿದೆ. ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ಕಲ್ಪಿಸಿದ್ದಾರೆ.





