24 September 2026 |

ಇನ್ನು ಗೃಹಲಕ್ಷ್ಮಿ ಹಣ ಸಾಲಕ್ಕೆ ಕಡಿತವಾಗಲ್ಲ; ಮರುಪರಿಶೀಲನೆಗೆ 17 ಪ್ರಶ್ನೆಗಳ ಅರ್ಜಿ!

  • 24 Sep 2026 09:33:08 AM

ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ’ ಯೋಜನೆಯ ಹಣ ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪುವಂತೆ ಸರ್ಕಾರ ಹೊಸ ಕ್ರಮಗಳನ್ನು ಕೈಗೊಂಡಿದೆ. ಫಲಾನುಭವಿಗಳ ಅರ್ಹತೆಯನ್ನು ಮರುಪರಿಶೀಲಿಸಲು ಮಾರ್ಗಸೂಚಿ ಪ್ರಕಟಿಸಿರುವ ಸರ್ಕಾರ, ಇದೀಗ 17 ಪ್ರಶ್ನೆಗಳನ್ನು ಒಳಗೊಂಡ ಹೊಸ ಅರ್ಜಿಯನ್ನು ಸಿದ್ಧಪಡಿಸಿದೆ.

 

ಹೊಸ ಪರಿಶೀಲನಾ ಪ್ರಕ್ರಿಯೆಯಲ್ಲಿ ಮನೆಯ ಯಜಮಾನಿಯ ಆಧಾರ್ ಮಾತ್ರವಲ್ಲದೆ, ಯಜಮಾನ ಅಥವಾ ಪತಿಯ ಆಧಾರ್ ಸಂಖ್ಯೆಯನ್ನೂ ಕಡ್ಡಾಯವಾಗಿ ಪಡೆಯಲಾಗುತ್ತದೆ. ಫಲಾನುಭವಿಯ ಹೆಸರಿನಲ್ಲಿರುವ ಬ್ಯಾಂಕ್ ಖಾತೆ ಸಾಲಕ್ಕೆ ಜೋಡಣೆಯಾಗಿರಬಾರದು. ಆಧಾರ್‌ನಲ್ಲಿರುವ ಹೆಸರು ಮತ್ತು ವಿಳಾಸವೂ ದಾಖಲೆಗಳಿಗೆ ಹೊಂದಿಕೆಯಾಗಬೇಕು.

 

ಫಲಾನುಭವಿಗಳ ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಆಧಾರ್, ಬ್ಯಾಂಕ್ ಖಾತೆ ಹಾಗೂ ಪಡಿತರ ಚೀಟಿಯ ಪರಿಶೀಲನೆ ನಡೆಸಲಾಗುತ್ತದೆ. ಇದರ ಜತೆಗೆ ಮುಖಚರ್ಯೆ ದೃಢೀಕರಣ ಅಥವಾ ಬಯೋಮೆಟ್ರಿಕ್ ಪರಿಶೀಲನೆಗೂ ಆದ್ಯತೆ ನೀಡಲಾಗಿದೆ. ಈ ಕಾರ್ಯಕ್ಕಾಗಿ ಗಣತಿದಾರರನ್ನು ನಿಯೋಜಿಸಲಾಗಿದ್ದು, ಅವರು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ.

 

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಫಲಾನುಭವಿಗಳ ಮನೆ-ಮನೆ ಸಮೀಕ್ಷೆ, ದಾಖಲೆಗಳ ಪರಿಶೀಲನೆ, ಬ್ಯಾಂಕ್ ಖಾತೆಯ ವಿವರಗಳ ದೃಢೀಕರಣ ಹಾಗೂ ಅಗತ್ಯ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಣೆಯಲ್ಲಿ ಈ ಮರುಪರಿಶೀಲನಾ ಪ್ರಕ್ರಿಯೆ ನಡೆಯಲಿದೆ.

 

ಸ್ವಯಂಪ್ರೇರಿತವಾಗಿ ಯೋಜನೆಯಿಂದ ಹೊರಬರಲು ಅವಕಾಶ

‘ಗೃಹಲಕ್ಷ್ಮಿ’ ಯೋಜನೆಯ ಸೌಲಭ್ಯ ಮುಂದುವರಿಸಲು ಇಚ್ಛಿಸದ ಫಲಾನುಭವಿಗಳಿಗೆ ಸ್ವಯಂಪ್ರೇರಿತವಾಗಿ ಯೋಜನೆಯಿಂದ ಹೊರಬರುವ ಅವಕಾಶವನ್ನೂ ನೀಡಲಾಗಿದೆ.

 

ಫಲಾನುಭವಿಯು ರಾಜ್ಯದಲ್ಲಿ ಆಧಾರ್‌ಗೆ ಜೋಡಣೆಯಾಗಿರುವ ವೈಯಕ್ತಿಕ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ಖಾತೆ ಸಾಲಕ್ಕೆ ಸಂಬಂಧಿಸಿರಬಾರದು ಹಾಗೂ ಜಂಟಿ ಖಾತೆಯಾಗಿರಬಾರದು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದರೆ ಜಾತಿ ಪ್ರಮಾಣಪತ್ರದ ಆರ್‌ಡಿ ಸಂಖ್ಯೆಯನ್ನು ನೀಡಬೇಕು.

 

ಇದರ ಜತೆಗೆ ಫಲಾನುಭವಿಯು ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಸರ್ಕಾರಿ ನೌಕರರಾಗಿದ್ದರೆ ಅಥವಾ ಸರ್ಕಾರಿ ಸ್ವಾಮ್ಯದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ಆ ಮಾಹಿತಿಯನ್ನೂ ಅರ್ಜಿಯಲ್ಲಿ ನಮೂದಿಸಬೇಕು. ಪತಿ ನಿವೃತ್ತಿ ಪಿಂಚಣಿ ಪಡೆಯುತ್ತಿದ್ದರೆ ಅದರ ವಿವರವನ್ನು ನೀಡುವುದೂ ಕಡ್ಡಾಯವಾಗಿದೆ.

 

ರಾಜ್ಯದಲ್ಲಿ ಎಸ್‌ಐಆರ್ ಪ್ರಕ್ರಿಯೆ ಪೂರ್ಣಗೊಂಡು ಮತದಾರರ ಅಂತಿಮ ಪಟ್ಟಿ ಪ್ರಕಟವಾದ ಬಳಿಕ ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನಾ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

ಸಾಲದ ಖಾತೆಗೆ ಹಣ ಹೋಗದಂತೆ ಕ್ರಮ

ಗೃಹಲಕ್ಷ್ಮಿ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾದ ಬಳಿಕ ಅದನ್ನು ಸಾಲದ ಬಾಕಿಗೆ ಕಡಿತ ಮಾಡಲಾಗುತ್ತಿದೆ ಎಂಬ ಆರೋಪಗಳು ಇತ್ತೀಚೆಗೆ ಕೇಳಿಬಂದಿದ್ದವು. ಕೆಲವು ಬ್ಯಾಂಕ್‌ಗಳು ಮತ್ತು ಖಾಸಗಿ ಹಣಕಾಸು ಸಂಸ್ಥೆಗಳು ಫಲಾನುಭವಿಗಳಿಗೆ ಬಂದ ಹಣವನ್ನು ಸಾಲದ ಮೊತ್ತಕ್ಕೆ ಹೊಂದಾಣಿಕೆ ಮಾಡಿಕೊಳ್ಳುತ್ತಿವೆ ಎಂಬ ದೂರುಗಳೂ ವ್ಯಕ್ತವಾಗಿದ್ದವು.

 

ಈ ಹಿನ್ನೆಲೆಯಲ್ಲಿ ಸಾಲಕ್ಕೆ ಲಿಂಕ್ ಆಗದ ಬ್ಯಾಂಕ್ ಖಾತೆಯ ವಿವರ ನೀಡುವಂತೆ ಸರ್ಕಾರ ಸೂಚಿಸಿದೆ. ಇದರಿಂದ ಗೃಹಲಕ್ಷ್ಮಿ ಯೋಜನೆಯಡಿ ಬಿಡುಗಡೆಯಾಗುವ ಹಣ ನೇರವಾಗಿ ಫಲಾನುಭವಿಯ ಬಳಕೆಗೆ ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿದೆ.