ನವದೆಹಲಿ: ದೇಶಾದ್ಯಂತ ಬ್ಯಾಂಕ್ ಗ್ರಾಹಕರಿಗೆ ಅನುಕೂಲವಾಗುವಂತೆ ಸೆಪ್ಟೆಂಬರ್ 27ರ ಭಾನುವಾರವೂ ಸಾರ್ವಜನಿಕ ವಲಯದ ಬ್ಯಾಂಕ್‌ಗಳು (PSBs) ಹಾಗೂ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು (RRBs) ಸಾಮಾನ್ಯವಾಗಿ ಕಾರ್ಯನಿರ್ವಹಿಸಲಿವೆ.
ಸೆಪ್ಟೆಂಬರ್ 28ರಿಂದ 30ರವರೆಗೆ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಮೂರು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಸೆಪ್ಟೆಂಬರ್ 26 ನಾಲ್ಕನೇ ಶನಿವಾರ ಹಾಗೂ ಸೆಪ್ಟೆಂಬರ್ 27 ಭಾನುವಾರವಾಗಿರುವುದರಿಂದ, ಮುಷ್ಕರದ ಜೊತೆಗೆ ಸತತ ಹಲವು ದಿನಗಳ ಕಾಲ ಬ್ಯಾಂಕ್‌ಗಳ ಸಾಮಾನ್ಯ ಸೇವೆಗೆ ಅಡಚಣೆಯಾಗುವ ಸಾಧ್ಯತೆ ಇತ್ತು.
ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 27ರಂದು ಬ್ಯಾಂಕ್ ಶಾಖೆಗಳು, ಕಚೇರಿಗಳು, ಎಟಿಎಂ-ಲಿಂಕ್ ಶಾಖೆಗಳು ಹಾಗೂ ಕರೆನ್ಸಿ ಚೆಸ್ಟ್‌ಗಳು ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನುಮತಿ ನೀಡಿದೆ.
ಏಕೆ ಮುಷ್ಕರ?
ಬ್ಯಾಂಕ್ ನೌಕರರ ಸಂಘಟನೆಗಳು ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಪ್ರಮುಖವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಐದು ದಿನಗಳ ಕೆಲಸದ ವಾರ ಜಾರಿಗೆ ತರುವುದು, ಪಿಂಚಣಿ ಸಂಬಂಧಿತ ಸೌಲಭ್ಯಗಳ ಸುಧಾರಣೆ ಹಾಗೂ ನಿವೃತ್ತ ಬ್ಯಾಂಕ್ ನೌಕರರಿಗೆ ಏಕರೂಪದ ತುಟ್ಟಿಭತ್ಯೆ (Dearness Allowance) ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟಿವೆ.
ಮೂರು ದಿನಗಳ ಮುಷ್ಕರವು ಸೆಪ್ಟೆಂಬರ್ 28ರಿಂದ 30ರವರೆಗೆ ನಡೆಯಲು ಉದ್ದೇಶಿಸಲಾಗಿದೆ. ಸೆಪ್ಟೆಂಬರ್ 30 ಬ್ಯಾಂಕ್‌ಗಳ ಅರ್ಧವಾರ್ಷಿಕ ಹಣಕಾಸು ಮುಕ್ತಾಯದ ದಿನವಾಗಿರುವುದರಿಂದ, ಈ ಅವಧಿಯ ಮುಷ್ಕರವು ಬ್ಯಾಂಕಿಂಗ್ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಗ್ರಾಹಕರಿಗೆ ತೊಂದರೆಯಾಗದಂತೆ ಅಗತ್ಯ ಬ್ಯಾಂಕಿಂಗ್ ಸೇವೆಗಳನ್ನು ಮುಂದುವರಿಸಲು ಸರ್ಕಾರ ಹಾಗೂ ಬ್ಯಾಂಕ್ ಆಡಳಿತಗಳು ಕ್ರಮ ಕೈಗೊಂಡಿದ್ದು, ಮುಷ್ಕರವನ್ನು ಮುಂದೂಡುವಂತೆ ಬ್ಯಾಂಕ್ ನೌಕರರ ಸಂಘಟನೆಗಳಿಗೆ ಮನವಿ ಮಾಡಿವೆ.
ಶಾಖೆಗೆ ತೆರಳಿ ಮಾಡಬೇಕಾದ ತುರ್ತು ಬ್ಯಾಂಕಿಂಗ್ ವ್ಯವಹಾರಗಳಿದ್ದರೆ, ಗ್ರಾಹಕರು ಸೆಪ್ಟೆಂಬರ್ 27ರ ಭಾನುವಾರದ ಹೆಚ್ಚುವರಿ ಕಾರ್ಯದಿನವನ್ನು ಬಳಸಿಕೊಳ್ಳಬಹುದು.





