24 September 2026 |

ಮಂಗಳೂರು: ಆಟೋ ಬಾಡಿಗೆ ದರ ಪರಿಷ್ಕರಣೆ ಗೊಂದಲ; ಚಾಲಕರು-ಪ್ರಯಾಣಿಕರಿಗೆ ಸಂಕಷ್ಟ

  • 24 Sep 2026 06:07:37 PM

ಮಂಗಳೂರು: ನಗರದಲ್ಲಿ ಇತ್ತೀಚೆಗೆ ಆಟೋ ರಿಕ್ಷಾಗಳ ಬಾಡಿಗೆ ದರ ಪರಿಷ್ಕರಣೆ ಮಾಡಲಾಗಿದ್ದು, ಹೊಸ ದರ ಜಾರಿಗೆ ಬಂದಿದ್ದರೂ ಅದರ ಅನುಷ್ಠಾನದಲ್ಲಿ ಉಂಟಾಗಿರುವ ಗೊಂದಲ ಇನ್ನೂ ಮುಂದುವರಿದಿದೆ. ಇದರಿಂದ ಆಟೋ ಚಾಲಕರು ಹಾಗೂ ಪ್ರಯಾಣಿಕರು ಇಬ್ಬರೂ ಸಮಸ್ಯೆ ಎದುರಿಸುವಂತಾಗಿದೆ.

 

ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಆಟೋ ರಿಕ್ಷಾ ಬಾಡಿಗೆ ದರ ಪರಿಷ್ಕರಿಸಿ ಆದೇಶ ಹೊರಡಿಸಿದ್ದರು. ಸೆಪ್ಟೆಂಬರ್ 1ರಿಂದ ಹೊಸ ದರ ಜಾರಿಗೆ ಬಂದಿದ್ದು, ಮೊದಲ 1.5 ಕಿ.ಮೀ.ಗೆ ವಿಧಿಸಲಾಗುತ್ತಿದ್ದ ಕನಿಷ್ಠ ₹35 ಬಾಡಿಗೆಯನ್ನು ₹40ಕ್ಕೆ ಹೆಚ್ಚಿಸಲಾಗಿದೆ. ನಂತರದ ಪ್ರತಿ ಕಿ.ಮೀ.ಗೆ ₹17 ಇದ್ದ ದರವನ್ನು ₹20ಕ್ಕೆ ಏರಿಕೆ ಮಾಡಲಾಗಿದೆ.

 

ಆದರೆ, ಇದೇ ದರ ಪರಿಷ್ಕರಣೆಯೇ ಇದೀಗ ಗೊಂದಲಕ್ಕೆ ಕಾರಣವಾಗಿದೆ. ಹಿಂದಿನ ಮೀಟರ್ ವ್ಯವಸ್ಥೆಯಲ್ಲಿಯೇ ಸ್ಟೇಜ್ ಹಂತದಲ್ಲಿ ಪ್ರತಿ ಕಿ.ಮೀ.ಗೆ ₹20 ದರ ಜಾರಿಯಲ್ಲಿತ್ತು. ಆದರೆ 2022ರ ಆದೇಶದಲ್ಲಿದ್ದ ₹17 ದರವನ್ನು ಆಧಾರವಾಗಿಟ್ಟುಕೊಂಡು ಅದನ್ನು ₹20ಕ್ಕೆ ಹೆಚ್ಚಿಸಿರುವುದಾಗಿ ಹೊಸ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈಗಾಗಲೇ ₹20 ಜಾರಿಯಲ್ಲಿರುವ ಹಿನ್ನೆಲೆಯಲ್ಲಿ, ಅದನ್ನು ಮತ್ತಷ್ಟು ಪರಿಷ್ಕರಿಸುವಂತೆ ಆದೇಶಿಸಬೇಕು ಎಂಬುದು ಆಟೋ ಚಾಲಕರ ವಾದವಾಗಿದೆ.

 

11 ಸಾವಿರ ಆಟೋಗಳಿಗೆ ಕೇವಲ ಎರಡು ಮೀಟರ್ ಪರಿಷ್ಕರಣೆ ಕೇಂದ್ರ

ಬಾಡಿಗೆ ದರದ ಗೊಂದಲ ಬಗೆಹರಿದ ಬಳಿಕ ಮಂಗಳೂರು ನಗರದಲ್ಲಿರುವ ಸುಮಾರು 11 ಸಾವಿರ ಆಟೋ ರಿಕ್ಷಾಗಳ ಮೀಟರ್‌ಗಳಲ್ಲಿ ಬದಲಾವಣೆ ಮಾಡಬೇಕಾಗಿದೆ. ಆದರೆ ಮೀಟರ್ ಆಲ್ಟರೇಷನ್ ಮಾಡಲು ನಗರದಲ್ಲಿ ಕೇವಲ ಎರಡು ಕೇಂದ್ರಗಳಿವೆ.

 

ಮೀಟರ್ ಬದಲಾವಣೆ ಪೂರ್ಣಗೊಂಡ ಬಳಿಕ ತೂಕ ಮತ್ತು ಮಾಪನ ಶಾಸ್ತ್ರ ಇಲಾಖೆಯಿಂದ ಅದನ್ನು ಪರಿಶೀಲಿಸಿ ದೃಢೀಕರಣ ಪ್ರಮಾಣಪತ್ರ ಪಡೆಯಬೇಕಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಗೆ ಸುಮಾರು 3ರಿಂದ 4 ತಿಂಗಳು ಬೇಕಾಗುವ ಸಾಧ್ಯತೆಯಿದೆ. ಹೀಗಾಗಿ ಹೊಸ ಬಾಡಿಗೆ ದರ ಮೀಟರ್‌ಗಳಲ್ಲಿ ಅಳವಡಿಸಲು ಇನ್ನಷ್ಟು ಸಮಯ ಬೇಕಾಗಬಹುದು.

 

ಕನಿಷ್ಠ ಬಾಡಿಗೆಯನ್ನು ₹50ಕ್ಕೆ ಹೆಚ್ಚಿಸುವಂತೆ ಮನವಿ

ದಕ್ಷಿಣ ಕನ್ನಡ ಜಿಲ್ಲಾ ಆಟೋ ರಿಕ್ಷಾ ಚಾಲಕ-ಮಾಲಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಶೆಟ್ಟಿ ಅವರ ಪ್ರಕಾರ, ಚಾಲಕರ ಪ್ರಮುಖ ಬೇಡಿಕೆಗಳನ್ನು ಜಿಲ್ಲಾಡಳಿತ ಇನ್ನೂ ಪರಿಗಣಿಸಿಲ್ಲ. ಕನಿಷ್ಠ ಮೀಟರ್ ಬಾಡಿಗೆಯನ್ನು ₹50ಕ್ಕೆ ಹಾಗೂ ನಂತರದ ಪ್ರತಿ ಕಿ.ಮೀ. ದರವನ್ನು ₹30ಕ್ಕೆ ಹೆಚ್ಚಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗಿತ್ತು.

 

ಬೇಡಿಕೆಗಳಿಗೆ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಮೀಟರ್ ಆಲ್ಟರೇಷನ್ ಪ್ರಕ್ರಿಯೆಯನ್ನು ಕೈಗೊಳ್ಳಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಸಿಎನ್‌ಜಿ, ಎಲ್‌ಪಿಜಿ ಸೇರಿದಂತೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಆಟೋ ಚಾಲಕರು ಆರ್ಥಿಕ ಒತ್ತಡ ಎದುರಿಸುತ್ತಿದ್ದಾರೆ. ಈ ಕುರಿತು ಜಿಲ್ಲಾಧಿಕಾರಿಗಳನ್ನು ಮತ್ತೊಮ್ಮೆ ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದು ಲೋಕೇಶ್ ಶೆಟ್ಟಿ ಹೇಳಿದ್ದಾರೆ.

 

ಹಳೆಯ ಮೀಟರ್‌ನಲ್ಲಿ ಹೊಸ ದರದ ಗೊಂದಲ

ಬಾಡಿಗೆ ದರ ಪರಿಷ್ಕರಣೆ ಆದೇಶದಲ್ಲಿರುವ ತಾಂತ್ರಿಕ ಸಮಸ್ಯೆ ಪರಿಹಾರವಾಗದ ಕಾರಣ ಬಹುತೇಕ ಆಟೋ ರಿಕ್ಷಾಗಳ ಮೀಟರ್‌ಗಳಲ್ಲಿ ಇನ್ನೂ ಹಳೆಯ ದರವೇ ಕಾಣಿಸುತ್ತಿದೆ. ಇದೇ ವೇಳೆ, ಪರಿಷ್ಕೃತ ದರದ ಆದೇಶವನ್ನು ಉಲ್ಲೇಖಿಸಿ ಕೆಲ ಚಾಲಕರು ಮೀಟರ್‌ನಲ್ಲಿ ತೋರಿಸುವ ಮೊತ್ತಕ್ಕಿಂತ ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ ಎಂಬ ಆರೋಪವೂ ಕೇಳಿಬರುತ್ತಿದೆ.

 

ಕೆಲವು ಕಡೆಗಳಲ್ಲಿ ಮೀಟರ್ ಬಳಕೆ ಮಾಡದೆ ನೇರವಾಗಿ ಹೆಚ್ಚುವರಿ ಬಾಡಿಗೆ ಕೇಳಲಾಗುತ್ತಿದೆ ಎನ್ನಲಾಗಿದ್ದು, ಇದರಿಂದ ಪ್ರಯಾಣಿಕರಲ್ಲೂ ಗೊಂದಲ ಉಂಟಾಗಿದೆ. ಹೆಚ್ಚುವರಿ ಹಣ ಕೇಳಿದಾಗ ಮೀಟರ್‌ನಲ್ಲಿ ಹೊಸ ದರವನ್ನು ಅಳವಡಿಸಿಲ್ಲ ಏಕೆ ಎಂದು ಪ್ರಯಾಣಿಕರು ಚಾಲಕರನ್ನು ಪ್ರಶ್ನಿಸುತ್ತಿದ್ದಾರೆ.

 

ಮೀಟರ್‌ನ ಎರಡನೇ ಸ್ಟೇಜ್ ಪರಿಷ್ಕರಣೆಗೆ ಸಂಬಂಧಿಸಿದ ಸಮಸ್ಯೆಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಜಿಲ್ಲಾಡಳಿತ ಈ ಗೊಂದಲವನ್ನು ಶೀಘ್ರ ಪರಿಹರಿಸಿ ಸ್ಪಷ್ಟವಾದ ಬಾಡಿಗೆ ದರ ಹಾಗೂ ಮೀಟರ್ ಪರಿಷ್ಕರಣೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಚಾಲಕರು ಮತ್ತು ಪ್ರಯಾಣಿಕರ ಒತ್ತಾಯವಾಗಿದೆ.