25 September 2026 |

ಬಂಟ್ವಾಳದಲ್ಲಿ ಹೆಜ್ಜೇನು ದಾಳಿ: ಅಸ್ವಸ್ಥಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಮೃತ್ಯು

  • 25 Sep 2026 12:04:46 PM

ಬಂಟ್ವಾಳ: ತೋಟದಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ವೇಳೆ ಹೆಜ್ಜೇನುಗಳು ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಅಸ್ವಸ್ಥಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳ ಕಸಬಾ ಗ್ರಾಮದ ಕೆಮ್ಮಟ್ಟೆ ಗುಡ್ಡೆಯಲ್ಲಿ ನಡೆದಿದೆ.

 

ಮೃತರನ್ನು ಕಮಲಾ ಎಂದು ಗುರುತಿಸಲಾಗಿದೆ. ಸೆ.23ರಂದು ಬೆಳಗ್ಗೆ ಮನೆಯ ಸಮೀಪದ ಅಡಿಕೆ ತೋಟಕ್ಕೆ ಹುಲ್ಲು ತೆಗೆಯಲು ಹಾಗೂ ಕೃಷಿ ಕೆಲಸಕ್ಕಾಗಿ ತೆರಳಿದ್ದ ವೇಳೆ ಅವರ ಮೇಲೆ ಹೆಜ್ಜೇನುಗಳು ದಾಳಿ ನಡೆಸಿವೆ. ಬೆನ್ನು, ಕಾಲು, ಮುಖ ಸೇರಿದಂತೆ ದೇಹದ ಹಲವು ಭಾಗಗಳಿಗೆ ಹೆಜ್ಜೇನುಗಳು ಕಚ್ಚಿದ್ದವು.

 

ದಾಳಿ ಬಳಿಕ ಮನೆಗೆ ಮರಳಿದ ಕಮಲಾ ಅವರು ಸುಮಾರು 11 ಗಂಟೆ ವೇಳೆಗೆ ಪುತ್ರ ದಿನೇಶ್ ಅವರಿಗೆ ನಡೆದ ಘಟನೆಯನ್ನು ತಿಳಿಸಿದ್ದಾರೆ. ಕೂಡಲೇ ದಿನೇಶ್ ಅವರು ಅವರನ್ನು ಬಂಟ್ವಾಳದ ಕ್ಲಿನಿಕ್‌ಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ಮನೆಗೆ ಕರೆತಂದಿದ್ದರು.

 

ಆದರೆ ಮಧ್ಯಾಹ್ನದ ವೇಳೆಗೆ ಕಮಲಾ ಅವರು ಮಾತನಾಡದೆ ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ತಕ್ಷಣ ಅಂಬುಲೆನ್ಸ್ ಮೂಲಕ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅವರನ್ನು ಪರೀಕ್ಷಿಸಿದ ವೈದ್ಯರು, ಆಸ್ಪತ್ರೆಗೆ ಕರೆತರುವ ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

 

ಈ ಸಂಬಂಧ ಪುತ್ರ ದಿನೇಶ್ ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.