25 September 2026 |

ಪ್ರಥಮ ಪಿಯು ಮಧ್ಯವಾರ್ಷಿಕ ಪರೀಕ್ಷೆಗೂ ಇಲಾಖೆಯಿಂದ ಪ್ರಶ್ನೆಪತ್ರಿಕೆ; 50 ಸರ್ಕಾರಿ ಕಾಲೇಜುಗಳಲ್ಲಿ ಹೊಸ ವ್ಯವಸ್ಥೆ

  • 25 Sep 2026 12:20:48 PM

ಬಂಟ್ವಾಳ: ರಾಜ್ಯದ ಆಯ್ದ 50 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಈ ಬಾರಿ ಪ್ರಥಮ ಪಿಯುಸಿ ಮಧ್ಯವಾರ್ಷಿಕ ಪರೀಕ್ಷೆಗೆ ಇಲಾಖೆಯೇ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ನೀಡಲಿದೆ. ರಾಜ್ಯಾದ್ಯಂತ ಏಕರೂಪದ ಪ್ರಶ್ನೆಪತ್ರಿಕೆ ಜಾರಿಗೆ ತರುವ ಯೋಜನೆಯ ಭಾಗವಾಗಿ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಈ ಹೊಸ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರುತ್ತಿದೆ.

 

ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಪದವಿ ಪೂರ್ವ ಕಾಲೇಜುಗಳ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆಗಳಿಗೆ ಇಲಾಖೆಯಿಂದಲೇ ಪ್ರಶ್ನೆಪತ್ರಿಕೆ ಒದಗಿಸುವ ಉದ್ದೇಶವಿದೆ. ಇದಕ್ಕೂ ಮುನ್ನ ವ್ಯವಸ್ಥೆಯ ಕಾರ್ಯವಿಧಾನವನ್ನು ಪರಿಶೀಲಿಸಲು ಪ್ರತಿ ಜಿಲ್ಲೆಯಿಂದ ಒಂದರಿಂದ ಎರಡು ಸರ್ಕಾರಿ ಪಿಯು ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ.

 

ಏಕರೂಪದ ಪ್ರಶ್ನೆಪತ್ರಿಕೆಗೆ ಪೂರ್ವಸಿದ್ಧತೆ

2026-27ನೇ ಸಾಲಿನಲ್ಲಿ ರಾಜ್ಯದಾದ್ಯಂತ ಒಂದೇ ಮಾದರಿಯ ಪ್ರಶ್ನೆಪತ್ರಿಕೆಯೊಂದಿಗೆ ಪರೀಕ್ಷೆ ನಡೆಸುವ ಯೋಜನೆಯ ಮೊದಲ ಹಂತವಾಗಿ ಆಯ್ದ 50 ಸರ್ಕಾರಿ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಯ ನಿರ್ದಿಷ್ಟ ಸಂಯೋಜನೆಗಳಿಗೆ ಮಧ್ಯವಾರ್ಷಿಕ ಪರೀಕ್ಷೆ ನಡೆಸಲಾಗುತ್ತಿದೆ.

 

ಇದಕ್ಕಾಗಿ ಅಗತ್ಯವಿರುವ ಪ್ರಶ್ನೆಪತ್ರಿಕೆಗಳನ್ನು ಇಲಾಖೆಯೇ ಸಿದ್ಧಪಡಿಸಲಿದೆ. ಪರೀಕ್ಷೆಯ ದಿನ ನಿಗದಿತ ಸಮಯಕ್ಕೆ ಆಯ್ಕೆಯಾದ ಕಾಲೇಜಿನ ಪ್ರಾಂಶುಪಾಲರ ಅಧಿಕೃತ ಲಾಗಿನ್‌ಗೆ ಪ್ರಶ್ನೆಪತ್ರಿಕೆ ಅಪ್‌ಲೋಡ್ ಆಗಲಿದೆ.

 

ಪರೀಕ್ಷೆ ದಿನವೇ ಪ್ರಶ್ನೆಪತ್ರಿಕೆ ಡೌನ್‌ಲೋಡ್

ಪರೀಕ್ಷೆ ನಡೆಯುವ ದಿನ ಬೆಳಗ್ಗೆ 9 ಗಂಟೆಗೆ ಪ್ರಾಂಶುಪಾಲರು ತಮ್ಮ ಅಧಿಕೃತ ಲಾಗಿನ್‌ಗೆ ಪ್ರವೇಶಿಸಿ ಪ್ರಶ್ನೆಪತ್ರಿಕೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವಷ್ಟು ಪ್ರತಿಗಳನ್ನು ಮಾತ್ರ ಮುದ್ರಿಸಿ, ಪ್ಯಾಕಿಂಗ್ ಮಾಡಿ ಪರೀಕ್ಷಾರ್ಥಿಗಳಿಗೆ ವಿತರಿಸಬೇಕಾಗುತ್ತದೆ.

 

ಆದರೆ, ಕೆಲವು ಕಾಲೇಜುಗಳಲ್ಲಿ ಪ್ರಥಮ ಪಿಯುಸಿ ಪರೀಕ್ಷೆಗಳು ಸೆ. 25ರಿಂದಲೇ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ಕಾಲೇಜು ಮಟ್ಟದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಕಾರ್ಯವನ್ನು ಸುಮಾರು ಒಂದು ತಿಂಗಳ ಹಿಂದೆಯೇ ಆರಂಭಿಸಲಾಗಿತ್ತು. ಇದೀಗ ಸೆ. 22ರಂದು ಹೊರಡಿಸಿದ ಆದೇಶದ ಮೂಲಕ ಆಯ್ದ 50 ಕಾಲೇಜುಗಳಿಗೆ ಇಲಾಖೆಯಿಂದಲೇ ಪ್ರಶ್ನೆಪತ್ರಿಕೆ ನೀಡಲು ತೀರ್ಮಾನಿಸಿರುವುದರಿಂದ, ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದ ಕಾಲೇಜುಗಳಲ್ಲಿ ಗೊಂದಲ ಉಂಟಾಗಿದೆ.

 

ಪ್ರಶ್ನೆಪತ್ರಿಕೆಗೆ ಕಾಲೇಜುವಾರು ವಾಟರ್‌ಮಾರ್ಕ್

ಪ್ರಶ್ನೆಪತ್ರಿಕೆ ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಪ್ರಾಂಶುಪಾಲರ ಲಾಗಿನ್‌ನಿಂದ ಡೌನ್‌ಲೋಡ್ ಮಾಡುವ ಪ್ರಶ್ನೆಪತ್ರಿಕೆಯಲ್ಲಿ ಆಯಾ ಕಾಲೇಜಿನ ಸಂಕೇತವನ್ನು ವಾಟರ್‌ಮಾರ್ಕ್ ರೂಪದಲ್ಲಿ ಅಳವಡಿಸಲಾಗುತ್ತದೆ.

 

ಒಂದು ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯಾದರೆ, ಸಂಬಂಧಿಸಿದ ಪ್ರಾಂಶುಪಾಲರು ಹಾಗೂ ಸೋರಿಕೆಗೆ ನೇರವಾಗಿ ಅಥವಾ ಪರೋಕ್ಷವಾಗಿ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.

 

ಪಿಸಿಎಂಬಿ, ಎಚ್‌ಇಬಿಎ, ಎಚ್‌ಇಪಿಎಸ್ ವಿದ್ಯಾರ್ಥಿಗಳಿಗೆ ಪರೀಕ್ಷೆ

ಆಯ್ಕೆಯಾಗಿರುವ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಪಿಯುಸಿಯ ಪಿಸಿಎಂಬಿ, ಎಚ್‌ಇಬಿಎ ಮತ್ತು ಎಚ್‌ಇಪಿಎಸ್ ಸಂಯೋಜನೆಗಳಿಗೆ ಇಲಾಖೆಯಿಂದ ಪ್ರಶ್ನೆಪತ್ರಿಕೆ ಒದಗಿಸಲಾಗುತ್ತದೆ.

 

ಮಧ್ಯವಾರ್ಷಿಕ ಪರೀಕ್ಷೆಗಳು ಅಕ್ಟೋಬರ್ 5ರಿಂದ 9ರವರೆಗೆ ನಡೆಯಲಿವೆ. ವಿದ್ಯಾರ್ಥಿಗಳು ಬೆಳಗ್ಗೆ 9 ಗಂಟೆಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಬೇಕು. ಬೆಳಗ್ಗೆ 9.05ರ ಬಳಿಕ ಪ್ರಶ್ನೆಪತ್ರಿಕೆ ಡೌನ್‌ಲೋಡ್, ಮುದ್ರಣ, ಪ್ಯಾಕಿಂಗ್ ಮತ್ತು ವಿತರಣೆ ಪ್ರಕ್ರಿಯೆ ನಡೆಯಲಿದೆ. ಬಳಿಕ ಬೆಳಗ್ಗೆ 11 ಗಂಟೆಗೆ ಪರೀಕ್ಷೆ ಆರಂಭವಾಗಿ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ.