ಬಂಟ್ವಾಳ: ತಾಲೂಕಿನ ರಾಯಿ ಸಮೀಪ ಬಿಸಿರೋಡು–ಮೂಡುಬಿದಿರೆ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ಗೋಳಿ ಮರವೊಂದು ರಸ್ತೆಗೆ ಅಡ್ಡವಾಗಿ ಉರುಳಿಬಿದ್ದಿದೆ. ಪರಿಣಾಮ ಸುಮಾರು ಒಂದು ಗಂಟೆ ಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು.
ಬೆಳಗಿನ ಸಮಯದಲ್ಲಿ ಮರ ರಸ್ತೆಯ ಮಧ್ಯಭಾಗಕ್ಕೆ ಬಿದ್ದಿದ್ದರಿಂದ ಶಾಲಾ ಮಕ್ಕಳು, ಉದ್ಯೋಗಕ್ಕೆ ತೆರಳುತ್ತಿದ್ದವರು ಸೇರಿದಂತೆ ಹಲವು ಪ್ರಯಾಣಿಕರು ಸಮಸ್ಯೆ ಎದುರಿಸಿದರು. ವಾಹನಗಳು ಮುಂದೆ ಸಾಗಲು ಸಾಧ್ಯವಾಗದೆ ಕೆಲಕಾಲ ಸಂಚಾರ ಸ್ಥಗಿತಗೊಂಡಿತ್ತು.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ರಾಯಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂತೋಷ್ ರಾಯಿಬೆಟ್ಟು ಅವರ ನೇತೃತ್ವದ ಸ್ಥಳೀಯರ ತಂಡ ಮರವನ್ನು ತೆರವುಗೊಳಿಸಿತು. ಬಳಿಕ ರಸ್ತೆಯಲ್ಲಿ ವಾಹನಗಳ ಸಂಚಾರ ಸಹಜ ಸ್ಥಿತಿಗೆ ಮರಳಿತು. ಘಟನೆಯಿಂದ ಯಾವುದೇ ಪ್ರಾಣಾಪಾಯ ಅಥವಾ ಆಸ್ತಿ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.





