25 September 2026 |

ಬಂಟ್ವಾಳ ಹತ್ಯೆ ಪ್ರಕರಣ: ಕಲ್ಲಡ್ಕ ಪ್ರಭಾಕರ್ ಭಟ್‌ಗೆ ಪೊಲೀಸ್ ನೋಟಿಸ್

  • 25 Sep 2026 07:59:04 PM

ಮಂಗಳೂರು: ಬಂಟ್ವಾಳದ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರಿಗೆ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿದೆ. ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

 

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕುರಿಯಾಲ ಗ್ರಾಮದ ಇರಾಕೋಡಿ ಪ್ರದೇಶದಲ್ಲಿ 2025ರ ಮೇ 25ರಂದು ಅಬ್ದುಲ್ ರೆಹಮಾನ್ ಅವರನ್ನು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಪಿಕ್‌ಅಪ್ ವಾಹನದಿಂದ ಮರಳು ಇಳಿಸುತ್ತಿದ್ದ ವೇಳೆ ದಾಳಿ ನಡೆದಿದ್ದು, ಅಬ್ದುಲ್ ರೆಹಮಾನ್ ಜೊತೆಯಲ್ಲಿದ್ದ ಕಲಂದರ್ ಶಫಿ ಮೇಲೂ ಗಂಭೀರ ಹಲ್ಲೆ ನಡೆದಿತ್ತು.

 

ಪ್ರಭಾಕರ್ ಭಟ್ ಅವರಿಗೆ ನೋಟಿಸ್ ನೀಡಿರುವುದಕ್ಕೆ ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣಕ್ಕೂ ಪ್ರಭಾಕರ್ ಭಟ್ ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿರುವ ಅವರು, ಕಾಂಗ್ರೆಸ್ ರಾಜಕೀಯ ಉದ್ದೇಶದಿಂದ ಹಿಂದೂ ಸಂಘಟನೆಗಳನ್ನು ಗುರಿಯಾಗಿಸುತ್ತಿದೆ ಎಂದು ಆರೋಪಿಸಿದ್ದಾರೆ.

 

ಯಾರನ್ನೋ ಮೆಚ್ಚಿಸಲು ಸಂಘಟನೆಗಳನ್ನು ಗುರಿಯಾಗಿಸಲಾಗುತ್ತಿದೆ ಎಂದು ಹೇಳಿದ ಶರಣ್ ಪಂಪ್‌ವೆಲ್, ಮುಂದಿನ ದಿನಗಳಲ್ಲಿ ಇದಕ್ಕೆ ಪರಿಣಾಮ ಎದುರಾಗಲಿದೆ ಎಂದು ತಿಳಿಸಿದ್ದಾರೆ. ತಮ್ಮ ಸಂಘಟನೆ ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದಿರುವ ಅವರು, ಸಂಘಟನೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದರೆ ಹಿಂದೂ ಸಮಾಜದಿಂದ ಪ್ರತಿಕ್ರಿಯೆ ಬರಲಿದೆ ಎಂದು ಹೇಳಿದ್ದಾರೆ.