20 June 2025 | Join group

'ಪ್ರೀತಿ - ಅಭಿಮಾನ ಈ ಎಲ್ಲಕ್ಕಿಂತ ಜೀವ ಮುಖ್ಯ ಎನ್ನುವುದನ್ನು ಅರ್ಥ ಮಾಡಿ' - ಸಿಎಂ ಸಿದ್ದರಾಮಯ್ಯ ಸಂತಾಪ ಸೂಚನೆ

  • 04 Jun 2025 08:26:49 PM

ಬೆಂಗಳೂರು: RCB ತಂಡದ ಐಪಿಎಲ್ ಚಾಂಪಿಯನ್ ಸಂಭ್ರಮೋತ್ಸವದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಕಾಲ್ತುಳಿತಕ್ಕೆ ಮೃತಪಟ್ಟವರ ಮತ್ತು ಗಾಯಗೊಂಡವರ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

 

ಅವರು ಸಾಮಾಜಿಕ ಜಾಲತಾಣದಲ್ಲಿ 'ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ತಂಡದ ಗೆಲುವಿನ ಸಂಭ್ರಮಾಚರಣೆ ವೇಳೆ ನೂಕುನುಗ್ಗಲು ಉಂಟಾಗಿ ಹಲವರು ಪ್ರಾಣ ಕಳೆದುಕೊಂಡು, ಮತ್ತೆ ಕೆಲವರು ಗಂಭೀರ ಗಾಯಗೊಂಡ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ.ಈ ದುರಂತದ ನೋವು ಗೆಲುವಿನ ಸಂಭ್ರಮವನ್ನೂ ಅಳಿಸಿಹಾಕಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

 

'ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಹಾರೈಸುತ್ತೇನೆ. ತಮ್ಮವರನ್ನು ಕಳೆದುಕೊಂಡ ದುಃಖತಪ್ತ ಕುಟುಂಬಗಳಿಗೆ ನನ್ನ ಸಂತಾಪಗಳು' ಎಂದು ಸಂತಾಪ ಸೂಚಿಸಿದ್ದಾರೆ.

 

'ಇಂತಹದ್ದೊಂದು ನೂಕುನುಗ್ಗಲು ನಡೆದು ಜನಸಂದಣಿಯನ್ನು ನಿಯಂತ್ರಣ ಮಾಡಲಾಗದೆ ಅಹಿತಕರ ಘಟನೆ ನಡೆಯಬಹುದೆಂಬ ನಿರೀಕ್ಷೆಯಿಂದಲೇ ತಂಡದ ವಿಜಯಯಾತ್ರೆಗೆ ಅವಕಾಶ ನೀಡದೆ ಮುಂಜಾಗ್ರತೆ ವಹಿಸಲಾಗಿತ್ತು. ಹೀಗಿದ್ದರೂ ಕ್ರೀಡಾಂಗಣದ ಬಳಿ ಜನ ಕಿಕ್ಕಿರಿದು ಸಾಗರದಂತೆ ಸೇರಿದ್ದ ಕಾರಣ ನೂಕುನುಗ್ಗಲು ನಡೆದು ಕಾಲ್ತುಳಿತದಿಂದ ಈ ಅವಘಡ ಸಂಭವಿಸಿದೆ'.

 

ಪ್ರೀತಿ - ಅಭಿಮಾನ ಈ ಎಲ್ಲಕ್ಕಿಂತ ಜೀವ ಮುಖ್ಯ ಎನ್ನುವುದನ್ನು ಅರ್ಥ ಮಾಡಿಕೊಂಡು, ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ ಎಂದು ಮನವಿ ಮಾಡಿದ್ದಾರೆ.

 

ಆದರೆ ವಿರೋಧ ಪಕ್ಷ ಬಿಜೆಪಿ 'ಸಂಭ್ರಮದ ಮನೆಯಲ್ಲಿ ಸೂತಕ ಉಂಟಾಗಲು ನೇರ ಕಾರಣ ಸಿಎಂ, ಈ ಕೊಲೆಗಡುಕ ಸರ್ಕಾರದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು' ಎಂದು ಆರೋಪಿಸಿದೆ. ಜೆಡಿಎಸ್ ಕೂಡ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ರಾಜೀನಾಮೆ ನೀಡಬೇಕೆಂದು ಬರೆದಿದೆ.