ಮುಂಬಯಿ: ಮುಂಬೈ ಲೊಕಲ್ ರೈಲುಗಳನ್ನು "ಜೀವನಾಡಿ" ಎಂದು ಕರೆಯುತ್ತಾರೆ. ಪ್ರತಿ ದಿನ ಲಕ್ಷಾಂತರ ಪ್ರಯಾಣಿಕರು ಈ ಸೇವೆ ಬಳಸುತ್ತಾರೆ. ಇದು ವಿಶ್ವದ ಅತ್ಯಂತ ಬ್ಯುಸಿಯಾಗಿರುವ ರೈಲು ವ್ಯವಸ್ಥೆಗಳಲ್ಲೊಂದು. ತ್ವರಿತ ಮತ್ತು ಕಡಿಮೆ ವೆಚ್ಚದ ಪ್ರಯಾಣಕ್ಕಾಗಿ ಮುಂಬೈ ಲೋಕಲ್ ರೈಲು ಯಾವಾಗಲು ಉತ್ತಮ. ಆದರೆ ಬೆಳಿಗ್ಗೆ ಮತ್ತು ಸಂಜೆ ಹೊತ್ತು ಈ ರೈಲುಗಳಲ್ಲಿ ಪ್ರಯಾಣಿಸುವುದೆಂದರೆ ಹಿಮಾಲಯ ಪರ್ವತ ಹತ್ತಿದ ಅನುಭವ.
ಇದೀಗ ಮುಂಬೈ ಮಹಾನಗರದಲ್ಲಿ ನಡೆದ ಸ್ಥಳೀಯ ರೈಲು ಅಪಘಾತಗಳ ಕುರಿತು ಪೊಲೀಸರು ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ ಅಪಘಾತಗಳಲ್ಲಿ 29,970 ಜನರು ಸಾವನ್ನಪ್ಪಿದ್ದಾರೆ ಮತ್ತು ಒಟ್ಟು 30,214 ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಚಲಿಸುತ್ತಿದ್ದ ರೈಲಿಂದ ಬಿದ್ದು 6,760 ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಾರದಲ್ಲೇ ಥಾಣೆಯ ಮುಂಬ್ರಾ ನಿಲ್ದಾಣದ ಬಳಿ ಭಾರಿ ಜನ ದಟ್ಟಣೆಯಿಂದಾಗಿ ರೈಲಿನಿಂದ ಕೆಳಗೆ ಬಿದ್ದು ಐವರು ಸಾವನ್ನಪ್ಪಿದ ಘಟನೆ ವರದಿಯಾಗಿತ್ತು.
ಮಹಾರಾಷ್ಟ್ರ ಸರಕಾರ ಕೊನೆಗೂ ಎಚ್ಚೆತ್ತು ಕೊಂಡಿದೆ. ಇನ್ನು ಮುಂದೆ ಲೋಕಲ್ ರೈಲ್ ಗಳಿಗೂ ಸ್ವಯಂಚಾಲಿತ ಮುಚ್ಚುವ ಬಾಗಿಲುಗಳನ್ನು ಮಾಡಲು ನಿರ್ಧರಿಸಿದೆ.