ಬೆಂಗಳೂರು: Apple Inc. ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ Tim Cook ಇತ್ತೀಚೆಗೆ ನೀಡಿದ ಹೇಳಿಕೆಗಳಿಂದ “ಅಮೆರಿಕದಲ್ಲಿ ಮಾರಾಟವಾಗುವ ಬಹುತೇಕ ಐಫೋನ್‌ಗಳು ಈಗ ಭಾರತದಲ್ಲಿ ತಯಾರಾಗುತ್ತಿವೆ” ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿದೆ. ಆದರೆ ಇದರ ಹಿಂದೆ ಇರುವ ನಿಜಾಂಶ ಏನು? ಸಂಪೂರ್ಣ ಐಫೋನ್ ಭಾರತದಲ್ಲೇ ತಯಾರಾಗುತ್ತಿದೆಯೇ? ಇಲ್ಲಿದೆ ಸ್ಪಷ್ಟ ಚಿತ್ರಣ.
ಸಂಪೂರ್ಣ ಐಫೋನ್ ಭಾರತದಲ್ಲೇ ತಯಾರಾಗುತ್ತಿದೆಯೇ?
ಸಂಪೂರ್ಣ ಐಫೋನ್ ಭಾರತದಲ್ಲೇ ತಯಾರಾಗುವುದಿಲ್ಲ. ಭಾರತದಲ್ಲಿ ನಡೆಯುವುದು ಮುಖ್ಯವಾಗಿ ಅಸೆಂಬ್ಲಿ ಪ್ರಕ್ರಿಯೆ ಮಾತ್ರ. Foxconn, Pegatron ಹಾಗೂ Tata Electronics ಕಂಪನಿಗಳ ಕಾರ್ಖಾನೆಗಳಲ್ಲಿ ಐಫೋನ್‌ಗಳ ಅಂತಿಮ ಜೋಡಣೆ, ಪರೀಕ್ಷೆ, iOS ಇನ್‌ಸ್ಟಾಲ್ ಮತ್ತು ಪ್ಯಾಕೇಜಿಂಗ್ ನಡೆಯುತ್ತದೆ. ವಿಶೇಷವೆಂದರೆ ಈ ಕಂಪನಿಗಳು ದಕ್ಷಿಣ ಭಾರತದಲ್ಲಿ ಅಂದರೆ ಮುಖ್ಯವಾಗಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಐಫೋನ್‌ಗೆ ಭಾಗಗಳು ಎಲ್ಲಿಂದ ಬರುತ್ತವೆ?
ಐಫೋನ್‌ಗೆ ಅಗತ್ಯವಾದ ಪ್ರಮುಖ ಭಾಗಗಳು ಇನ್ನೂ ವಿವಿಧ ದೇಶಗಳಿಂದ ಬರುತ್ತವೆ. ಉದಾಹರಣೆಗೆ ಪ್ರೊಸೆಸರ್ ಚಿಪ್‌ಗಳು ತೈವಾನ್ ನಿಂದ ಬಂದರೆ, ಡಿಸ್ಪ್ಲೇ – ಸೌತ್ ಕೊರಿಯಾ ಅಥವಾ ಜಪಾನ್ ನಿಂದ ಬರುತ್ತದೆ ಮತ್ತು ಕ್ಯಾಮೆರಾ ಭಾಗಗಳು ಕೂಡ ಜಪಾನ್ ದೇಶದಿಂದ ಇಂಪೋರ್ಟ್ ಮಾಡಲಾಗುತ್ತದೆ. ಅಂದರೆ, ಐಫೋನ್ ಉತ್ಪಾದನೆ 25ಕ್ಕೂ ಹೆಚ್ಚು ದೇಶಗಳನ್ನು ಒಳಗೊಂಡಿರುವ ಜಾಗತಿಕ ಸರಪಳಿಯ ಭಾಗವಾಗಿದೆ.
ಆಪಲ್ ನ ಸಿಇಓ ಟಿಮ್ ಕುಕ್ ಹೇಳಿದ್ದೇನು?
ಟಿಮ್ ಕುಕ್ ಅವರು ಹೇಳುವ ಪ್ರಕಾರ ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳ “ಬಹುಪಾಲು” ಈಗ ಭಾರತದಲ್ಲಿ ಅಸೆಂಬಲ್ ಆಗುತ್ತಿವೆ ಮತ್ತು 2026ರ ಅಂತ್ಯದೊಳಗೆ ಅಮೆರಿಕಕ್ಕೆ ಹೋಗುವ ಎಲ್ಲಾ ಐಫೋನ್‌ಗಳನ್ನು ಭಾರತದಲ್ಲಿ ಅಸೆಂಬಲ್ ಮಾಡುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದ್ದಾರೆ.
ಭಾರತದಲ್ಲಿ ಉತ್ಪಾದನೆ ಎಷ್ಟು ಹೆಚ್ಚಾಗಿದೆ?
2025ರಲ್ಲಿ ಭಾರತದಲ್ಲಿ ಸುಮಾರು 55 ಮಿಲಿಯನ್ ಐಫೋನ್‌ಗಳು ಅಸೆಂಬಲ್ ಮಾಡಲಾಗಿದೆ. ಇದು 2024ರ 36 ಮಿಲಿಯನ್‌ಗಿಂತ 53% ಹೆಚ್ಚಳ. ಒಟ್ಟಾರೆ Apple Inc. ಉತ್ಪಾದನೆಯಲ್ಲಿನ ಸುಮಾರು 25% ಹಂಚಿಕೆ ಈಗ ಭಾರತದಲ್ಲಿದೆ. 2026ರಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.
ಗುಣಮಟ್ಟದಲ್ಲಿ ವ್ಯತ್ಯಾಸ ಇದೆಯೇ?
ಇಲ್ಲ. Apple Inc. ಎಲ್ಲಾ ದೇಶಗಳಲ್ಲಿ ಒಂದೇ ಗುಣಮಟ್ಟದ ಮಾನದಂಡ ಅನುಸರಿಸುತ್ತದೆ. ಭಾರತದಲ್ಲಿ ಅಸೆಂಬಲ್ ಮಾಡಿದ ಐಫೋನ್ ಮತ್ತು ಚೀನಾದಲ್ಲಿ ಅಸೆಂಬಲ್ ಮಾಡಿದ ಐಫೋನ್ ನಡುವೆ ಯಾವುದೇ ಗುಣಮಟ್ಟದ ವ್ಯತ್ಯಾಸ ಇಲ್ಲ ಎನ್ನಲಾಗಿದೆ.
ಭಾರತದಲ್ಲಿ ಐಫೋನ್ ಬೆಲೆ ಏಕೆ ಹೆಚ್ಚು?
ಭಾರತದಲ್ಲೇ ಅಸೆಂಬಲ್ ಆಗುತ್ತಿದ್ದರೂ ಬೆಲೆ ಕಡಿಮೆಯಾಗಿಲ್ಲ. ಕಾರಣಗಳು ಇಷ್ಟೇ, ಆಮದು ಭಾಗಗಳ ಮೇಲೆ ತೆರಿಗೆ, 18% GST ಮತ್ತು Apple Inc. ನ ಜಾಗತಿಕ ಬೆಲೆ ನೀತಿ ಈ ಎಲ್ಲಾ ಕಾರಣಗಳಿಂದ ಭಾರತದಲ್ಲಿ ಐಫೋನ್ ಬೆಲೆಗಳು ಸಾಮಾನ್ಯವಾಗಿ ಅಮೆರಿಕಕ್ಕಿಂತ 20–30% ಹೆಚ್ಚು ಕಾಣಿಸಬಹುದು.
ಅಮೆರಿಕದಲ್ಲಿ ಮಾರಾಟವಾಗುವ ಐಫೋನ್‌ಗಳು ಈಗ ಬಹುಪಾಲು ಭಾರತದಲ್ಲಿ ಅಸೆಂಬಲ್ ಆಗುತ್ತಿರುವುದು ಸತ್ಯ. ಸಂಪೂರ್ಣ ಉತ್ಪಾದನೆ ಭಾರತದಲ್ಲೇ ನಡೆಯುತ್ತಿಲ್ಲವಾದರೂ ಮುಂದಿನ ದಿನಗಳಲ್ಲಿ ಭಾರತ ಟಾಪ್ ಟು ಎಂಡ್ ಐಫೋನ್ ಉತ್ಪಾದನೆ ಮಾಡುವ ಕಾರ್ಖಾನೆಗಳನ್ನು ಹೊಂದುವ ಸಾಧ್ಯತೆ ಇದೆ.





