ಐಪಿಎಲ್‌ನಲ್ಲಿ ₹2,400 ಕೋಟಿ ಆದಾಯ ನಷ್ಟ? ಲಲಿತ್ ಮೋದಿ ಆರೋಪ - ಕಾರಣವೇನು?

  • 08 Apr 2026 09:11:21 PM

ಭಾರತದ ಅತ್ಯಂತ ಜನಪ್ರಿಯ ಕ್ರಿಕೆಟ್ ಲೀಗ್ ಆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ವರ್ಷಕ್ಕೆ ಸುಮಾರು ₹2,400 ಕೋಟಿ ಆದಾಯ ನಷ್ಟವಾಗುತ್ತಿದೆ ಎಂದು ಐಪಿಎಲ್‌ನ ಸ್ಥಾಪಕ ಲಲಿತ್ ಮೋದಿ ಆರೋಪಿಸಿದ್ದಾರೆ. ಅವರು ಲೀಗ್ ಪ್ರಸ್ತುತ ಮೂಲ ‘ಹೋಮ್-ಅಂಡ್-ಅವೇ’ ಮಾದರಿಯನ್ನು ಸಂಪೂರ್ಣವಾಗಿ ಅನುಸರಿಸದಿರುವುದರಿಂದ ಎಂದು ಹೇಳಿದ್ದಾರೆ.

 

94 ಪಂದ್ಯಗಳ ಬದಲು 74 ಪಂದ್ಯಗಳು

ಐಪಿಎಲ್‌ನಲ್ಲಿ ಈಗ 10 ತಂಡಗಳಿವೆ. ನಿಯಮಿತ ‘ಡಬಲ್ ರೌಂಡ್ ರಾಬಿನ್’ ಮಾದರಿಯಲ್ಲಿ ಪ್ರತೀ ತಂಡವೂ ಉಳಿದ ಎಲ್ಲಾ ತಂಡಗಳ ವಿರುದ್ಧ ಎರಡು ಬಾರಿ ಆಟವಾಡಲಿದೆ. ಒಂದು ಬಾರಿ ತಮ್ಮ ಮೈದಾನದಲ್ಲಿ ಮತ್ತು ಮತ್ತೊಮ್ಮೆ ಎದುರಾಳಿ ಮೈದಾನದಲ್ಲಿ ಆಡಬೇಕಾಗಿದೆ. ಈ ರೀತಿಯಲ್ಲಿ ಲೀಗ್ ಹಂತದಲ್ಲೇ 90 ಪಂದ್ಯಗಳು ನಡೆಯಬೇಕು. ಪ್ಲೇಆಫ್ ಸೇರಿಸಿ ಒಟ್ಟು 94 ಪಂದ್ಯಗಳಾಗಬೇಕು. ಆದರೆ ಕಳೆದ ಕೆಲವು ಸೀಸನ್‌ಗಳಿಂದ ಐಪಿಎಲ್ ಕೇವಲ 74 ಪಂದ್ಯಗಳೊಂದಿಗೆ ನಡೆಯುತ್ತಿದೆ. ಅಂದರೆ 20 ಪಂದ್ಯಗಳು ಕಡಿಮೆಯಾಗಿವೆ.

 

₹2,400 ಕೋಟಿ ಲೆಕ್ಕ ಹೇಗೆ?

ಪ್ರಸ್ತುತ ಮಾಧ್ಯಮ ಹಕ್ಕುಗಳ ಮೌಲ್ಯವನ್ನು ಗಮನಿಸಿದರೆ ಪ್ರತಿಯೊಂದು ಪಂದ್ಯದಿಂದ ಸರಾಸರಿ ₹100 ಕೋಟಿ ಮೇಲ್ಪಟ್ಟ ಆದಾಯ ಲಭಿಸುತ್ತದೆ ಎಂದು ಅಂದಾಜಿಸಲಾಗಿದೆ. 20 ಪಂದ್ಯಗಳು ನಡೆಯದೇ ಇರುವುದರಿಂದ ಒಟ್ಟು ಸುಮಾರು ₹2,400 ಕೋಟಿ ಆದಾಯ ಕಳೆದುಕೊಳ್ಳಲಾಗುತ್ತಿದೆ ಎಂಬುದು ಲಲಿತ್ ಮೋದಿ ಅವರ ಅಭಿಪ್ರಾಯ.

 

ಆದಾಯ ಹಂಚಿಕೆ ಹೇಗೆ?

ಐಪಿಎಲ್‌ನಲ್ಲಿ ಮಾಧ್ಯಮ ಹಕ್ಕುಗಳ ಆದಾಯವನ್ನು 50% ಬಿಸಿಸಿಐ ಪಡೆದುಕೊಳ್ಳುತ್ತದೆ. ಉಳಿದ 50% ಅನ್ನು ಫ್ರಾಂಚೈಸಿಗಳಿಗೆ ಹಂಚಲಾಗುತ್ತದೆ. 20 ಪಂದ್ಯಗಳು ಕಡಿಮೆಯಾಗುವುದರಿಂದ ಬಿಸಿಸಿಐಗೆ ಸುಮಾರು ₹1,200 ಕೋಟಿ ನಷ್ಟ ಮತ್ತು 10 ಫ್ರಾಂಚೈಸಿಗಳಿಗೆ ಒಟ್ಟಾರೆ ಸುಮಾರು ₹1,200 ಕೋಟಿ ನಷ್ಟ ಆ ಮೂಲಕ ಪ್ರತಿ ತಂಡದ ಆದಾಯದಲ್ಲಿ ಸರಾಸರಿ ₹120 ಕೋಟಿ ಕಡಿಮೆಯಾಗುತ್ತದೆ ಎಂದು ಲಲಿತ್ ಮೋದಿ ಲೆಕ್ಕ ಹಾಕಿದ್ದಾರೆ.

 

ಐಪಿಎಲ್ ವಿಶ್ವದಲ್ಲೇ ಅತ್ಯಂತ ಮೌಲ್ಯಯುತ ಟಿ20 ಲೀಗ್ ಆಗಿ ಬೆಳೆಯುತ್ತಿದೆ. ಆದರೂ ಮೂಲ ಮಾದರಿಯನ್ನು ಸಂಪೂರ್ಣವಾಗಿ ಅನುಸರಿಸಿದರೆ ಅದರ ವಾಣಿಜ್ಯ ಮೌಲ್ಯ ಇನ್ನಷ್ಟು ಹೆಚ್ಚಬಹುದು ಎಂಬುದು ಲಲಿತ್ ಮೋದಿ ಅವರ ಅಭಿಪ್ರಾಯಪಟ್ಟಿದ್ದಾರೆ.