ಉಡುಪಿ: ಉದ್ಯಾವರದ ಪಾಪನಾಶಿನಿ ಸೇತುವೆ ಮೇಲಿಂದ ನದಿಗೆ ಹಾರಿದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಂಗಳವಾರ ನಡೆದಿದೆ. ಮೃತರನ್ನು ಉದ್ಯಾವರ ಪಿತ್ರೋಡಿ ನಿವಾಸಿ ಹರ್ಷಿತ್ ಶೆಟ್ಟಿ (28) ಎಂದು ಗುರುತಿಸಲಾಗಿದೆ.
ಮಂಗಳವಾರ ಬೆಳಗಿನ ಜಾವ ಸುಮಾರು 5 ಗಂಟೆಗೆ ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಬೋಳಾರುಗುಡ್ಡೆ ಮೈದಾನಕ್ಕೆ ತೆರಳುವುದಾಗಿ ಮನೆಯಲ್ಲಿ ತಿಳಿಸಿ ಹರ್ಷಿತ್ ಹೊರಟಿದ್ದರು. ಆದರೆ, ಸಾಕಷ್ಟು ಸಮಯ ಕಳೆದರೂ ಅವರು ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ಮೊಬೈಲ್‌ಗೆ ಕರೆ ಮಾಡಿದಾಗ ಅದು ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ.
ಈ ಸಂದರ್ಭ ಉದ್ಯಾವರ ಪಾಪನಾಶಿನಿ ಸೇತುವೆಯ ಮೇಲೆ ಹರ್ಷಿತ್ ಅವರ ದ್ವಿಚಕ್ರ ವಾಹನ ಪತ್ತೆಯಾಗಿದ್ದು, ಅವರು ನದಿಗೆ ಹಾರಿರುವ ಶಂಕೆ ವ್ಯಕ್ತವಾಯಿತು. ಮಾಹಿತಿ ತಿಳಿದ ಸ್ಥಳೀಯರು ಹಾಗೂ ಕುಟುಂಬಸ್ಥರು ತಕ್ಷಣವೇ ಮುಳುಗು ತಜ್ಞ ಈಶ್ವರ ಮಲ್ಪೆ ಅವರಿಗೆ ವಿಷಯ ತಿಳಿಸಿದರು.
ಬಳಿಕ ಈಶ್ವರ ಮಲ್ಪೆ ಮತ್ತು ಅವರ ತಂಡ ನದಿಯಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿತು. ಹಲವು ಗಂಟೆಗಳ ಹುಡುಕಾಟದ ಬಳಿಕ ಮಂಗಳವಾರ ಸಂಜೆ ವೇಳೆಗೆ ಹರ್ಷಿತ್ ಅವರ ಮೃತದೇಹ ನದಿಯಿಂದ ಹೊರತೆಗೆದರು.
ಹರ್ಷಿತ್ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ಕುರಿತು ಕುಟುಂಬದವರ ದೂರಿನ ಆಧಾರದ ಮೇಲೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





