ಮಂಗಳೂರು: ಆನ್‌ಲೈನ್ ಖರೀದಿ-ಮಾರಾಟ ವೇದಿಕೆ OLXನಲ್ಲಿ ಐಷಾರಾಮಿ ‘ಕಾಂಟಿನೆಂಟಲ್ ಜಿಟಿ 650’ ಬೈಕ್ ಮಾರಾಟಕ್ಕಿದೆ ಎಂಬ ಜಾಹೀರಾತನ್ನು ನಂಬಿದ ತಂದೆ-ಮಗ ಜೋಡಿ ₹5,58,710 ಕಳೆದುಕೊಂಡಿರುವ ಘಟನೆ ವರದಿಯಾಗಿದೆ. ಹಣ ಪಡೆದುಕೊಂಡ ಬಳಿಕ ಆರೋಪಿಯು ಜೀವ ಬೆದರಿಕೆಯನ್ನೂ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಂತ್ರಸ್ತರ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ತಮ್ಮ ಮಗನಿಗಾಗಿ ಬೈಕ್ ಖರೀದಿಸಲು ಬಯಸಿದ ದೂರುದಾರರು OLXನಲ್ಲಿ ಹುಡುಕಾಟ ನಡೆಸಿದ ವೇಳೆ ರಾಯಲ್ ಎನ್‌ಫೀಲ್ಡ್ ಕಂಪನಿಯ ಕಾಂಟಿನೆಂಟಲ್ ಜಿಟಿ 650 ಬೈಕ್ ಮಾರಾಟಕ್ಕಿರುವ ಜಾಹೀರಾತು ಕಂಡುಬಂದಿತ್ತು. ಬಳಿಕ ಸಂಪರ್ಕಿಸಿದ ವ್ಯಕ್ತಿ, ತಾನು ಬೆಂಗಳೂರಿನ ವಿ.ವಿ.ಪುರಂ ಪ್ರದೇಶದಲ್ಲಿರುವ ‘ಉಸ್ಮಾನ್ ಆಟೋ ಕನ್ಸಲ್ವೆಂಟ್ಸ್’ ಸಂಸ್ಥೆಯ ಸೈಯದ್ ತೌಸಿಫ್ ಪಾಷಾ ಎಂದು ಪರಿಚಯಿಸಿಕೊಂಡಿದ್ದಾನೆ.
ಮೊದಲು ನೋಂದಣಿ ಶುಲ್ಕವಾಗಿ ₹5,000 ಹಾಗೂ ಕಮಿಷನ್ ರೂಪದಲ್ಲಿ ₹10,000 ಪಾವತಿಸಬೇಕೆಂದು ಹೇಳಿ ನಂಬಿಸಿದ್ದಾನೆ. ನಂತರ ಬೈಕ್ ಖರೀದಿ ಪ್ರಕ್ರಿಯೆ ಮುಂದುವರಿಸಲು ₹57,000 ಮುಂಗಡ ಹಣ ಕೇಳಿದ್ದಾನೆ. ಅದರಂತೆ 2026ರ ಫೆಬ್ರವರಿ 18ರಂದು ಯುಪಿಐ ಮೂಲಕ ಆರೋಪಿಯ ಮೊಬೈಲ್ ಸಂಖ್ಯೆ 6362848200ಕ್ಕೆ ಹಣ ವರ್ಗಾಯಿಸಲಾಗಿದೆ.
ಆ ಬಳಿಕ ವಿವಿಧ ಕಾರಣಗಳನ್ನು ಮುಂದಿಟ್ಟು ಬೇರೆ ಬೇರೆ ಬ್ಯಾಂಕ್ ಖಾತೆಗಳು ಹಾಗೂ ಯುಪಿಐ ಐಡಿಗಳಿಗೆ ಹಣ ಕಳುಹಿಸುವಂತೆ ಒತ್ತಾಯಿಸಿದ್ದಾನೆ. ಇದರಂತೆ ನೆಫ್ಟ್ ಮತ್ತು ಐಎಂಪಿಎಸ್ ಮೂಲಕ ಹಂತ ಹಂತವಾಗಿ 2026ರ ಮಾರ್ಚ್ 4ರೊಳಗೆ ಒಟ್ಟು ₹5,58,710 ಹಣವನ್ನು ಪಡೆದುಕೊಂಡಿದ್ದಾನೆ.
ಇಷ್ಟೊಂದು ಮೊತ್ತ ವರ್ಗಾವಣೆಯಾದ ಬಳಿಕವೂ ಮತ್ತಷ್ಟು ಹಣ ಕಳುಹಿಸುವಂತೆ ಆರೋಪಿಯು ಒತ್ತಡ ಹೇರಿದ್ದಾನೆ. ಇದರಿಂದ ಅನುಮಾನಗೊಂಡ ತಂದೆ-ಮಗ ಬೈಕ್ ಒದಗಿಸುವಂತೆ ಅಥವಾ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ಆರೋಪಿಯು ಫೋನ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
OLX ಹೆಸರಿನಲ್ಲಿ ನಕಲಿ ಜಾಹೀರಾತು ನೀಡಿ ವಂಚನೆ ನಡೆಸಿರುವ ಆರೋಪದಡಿ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.





