ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಕಾನೂನು ಸಂಘರ್ಷಕ್ಕೊಳಗಾದ ಬಾಲಕರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆ ಸೇರಿದಂತೆ ವಿವಿಧ ಗಂಭೀರ ಕಲಂಗಳಡಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಅಪ್ರಾಪ್ತ ಬಾಲಕಿಯ ಮೇಲೆ ನಡೆದಿದ್ದ ದೌರ್ಜನ್ಯದ ಬಗ್ಗೆ ಮಾಹಿತಿ ದೊರೆತ ನಂತರ, ಪೋಷಕರು ಬಾಲಕಿಯನ್ನು ವಿಚಾರಿಸಿದಾಗ ಘಟನೆ ಬಹಿರಂಗಗೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನ ವಿವರಗಳ ಪ್ರಕಾರ, ದೂರುದಾರರ ಸಂಬಂಧಿಕನಾಗಿರುವ ಒಬ್ಬ ಅಪ್ರಾಪ್ತ ಬಾಲಕ ಹಾಗೂ ಆತನ ಸ್ನೇಹಿತನಾದ ಮತ್ತೊಬ್ಬ ಅಪ್ರಾಪ್ತ ಬಾಲಕ 2023ರಲ್ಲಿ ಬೆಳ್ತಂಗಡಿ ಭಾಗದಲ್ಲಿರುವ ಡ್ಯಾಂ ಸಮೀಪದ ಕಟ್ಟಡವೊಂದಕ್ಕೆ ಬಾಲಕಿಯನ್ನು ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ. ಅಲ್ಲದೆ, ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬಾಲಕಿಗೆ ಜೀವ ಬೆದರಿಕೆ ಹಾಕಿರುವುದಾಗಿಯೂ ಆರೋಪಿಸಲಾಗಿದೆ.
ಜೂನ್ 23ರಂದು ಸಲ್ಲಿಸಲಾದ ದೂರಿನ ಆಧಾರದಲ್ಲಿ ವೇಣೂರು ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಕಲಂಗಳು ಹಾಗೂ ಪೋಕ್ಸೋ ಕಾಯ್ದೆಯ ಕಲಂ 6ರಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.




