25 June 2026 |

ವಿಟ್ಲ ಬೊಬ್ಬೆಕೇರಿ ರಸ್ತೆ ಕಾಮಗಾರಿ ಅವ್ಯವಸ್ಥೆ: ಆಳವಾದ ಗುಂಡಿಗೆ ವಾಹನಗಳು ಬಲಿ, ಸಾರ್ವಜನಿಕರಿಂದ ತೀವ್ರ ಆಕ್ರೋಶ

  • 25 Jun 2026 11:03:01 AM

ವಿಟ್ಲ: ವಿಟ್ಲದ ಬೊಬ್ಬೆಕೇರಿ ಪ್ರದೇಶದಲ್ಲಿ ಕಳೆದ ಎರಡು ವಾರಗಳಿಂದ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಸಾರ್ವಜನಿಕರಿಗೆ ಭಾರೀ ತೊಂದರೆಯನ್ನುಂಟು ಮಾಡಿದೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಈ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಪರಿವರ್ತಿಸಲಾಗಿದ್ದರೂ, ಕಾಮಗಾರಿ ನಿರ್ವಹಣೆಯಲ್ಲಿನ ನಿರ್ಲಕ್ಷ್ಯದಿಂದ ರಸ್ತೆ ಅಪಾಯಕಾರಿಯಾಗಿ ಮಾರ್ಪಟ್ಟಿದೆ ಎಂಬ ಆರೋಪ ಕೇಳಿಬಂದಿದೆ. ರಸ್ತೆಯ ಮಧ್ಯಭಾಗದಲ್ಲಿ ಸುಮಾರು ಏಳು ಅಡಿ ಆಳದ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸಂಚಾರಕ್ಕೆ ಗಂಭೀರ ಅಡಚಣೆ ಉಂಟಾಗಿದೆ.

 

ರಸ್ತೆಯ ದುಸ್ಥಿತಿಯ ಕುರಿತು ವಾಹನ ಸವಾರರು ಹಾಗೂ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಸಮರ್ಪಕ ಸ್ಪಂದನೆ ದೊರಕಿಲ್ಲ ಎಂದು ಆರೋಪಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಶಾಲಾ ವಾಹನಗಳು ಹಾಗೂ ಇತರ ವಾಹನ ಚಾಲಕರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಈ ಹಿಂದೆ ಮನವಿ ಮಾಡಿದ್ದರು. ಈಗಾಗಲೇ ಎರಡು-ಮೂರು ಆಟೋ ರಿಕ್ಷಾಗಳು ಹಾಗೂ ಹಲವಾರು ದ್ವಿಚಕ್ರ ವಾಹನಗಳು ಗುಂಡಿಗಳಿಗೆ ಬಿದ್ದು ಅಪಾಯದಿಂದ ಪಾರಾಗಿರುವ ಘಟನೆಗಳು ನಡೆದಿವೆ.

 

ಬುಧವಾರ (ಜೂನ್ 25, 2026) ಬೆಳಿಗ್ಗೆ ಮತ್ತೊಂದು ಗಂಭೀರ ಘಟನೆ ಸಂಭವಿಸಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನವೊಂದು ರಸ್ತೆ ಮಧ್ಯದ ಆಳವಾದ ಗುಂಡಿಗೆ ಸಿಲುಕಿಕೊಂಡಿದ್ದು, ಸ್ಥಳೀಯರು ತಕ್ಷಣ ಧಾವಿಸಿ ವಾಹನವನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

 

ಇದಾದ ಕೆಲವೇ ಸಮಯದಲ್ಲಿ ಕಲ್ಲು ಸಾಗಿಸುತ್ತಿದ್ದ ಭಾರೀ ಲಾರಿಯೊಂದು ಕೂಡ ಅದೇ ಗುಂಡಿಗೆ ಸಿಲುಕಿ ಹೂತುಹೋಗಿದೆ. ಪರಿಣಾಮವಾಗಿ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ. ಲಾರಿಯನ್ನು ಹೊರತೆಗೆದು ರಸ್ತೆ ಸಂಚಾರ ಪುನಃಾರಂಭಿಸಲು ಕ್ರೇನ್ ಸಹಾಯದಿಂದ ಕಾರ್ಯಾಚರಣೆ ನಡೆಯುತ್ತಿದೆ.

 

ಕಳೆದ ಮೂರು ದಿನಗಳಲ್ಲಿ ಮಾತ್ರವೇ 12ಕ್ಕೂ ಹೆಚ್ಚು ವಾಹನಗಳು ಇದೇ ಗುಂಡಿಗೆ ಬಿದ್ದು ಅಪಾಯದಿಂದ ಪಾರಾಗಿವೆ ಎಂದು ಸ್ಥಳೀಯ ನಿವಾಸಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಕಾಮಗಾರಿ ಆರಂಭವಾದಾಗ ರಸ್ತೆಯ ಒಂದು ಬದಿಯಲ್ಲಿ ಜಲ್ಲಿ ಹಾಗೂ ಬಂಡೆ ಕಲ್ಲುಗಳನ್ನು ಹಾಕಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ನಂತರ ರಸ್ತೆಯ ಮಧ್ಯದಲ್ಲಿ ರೋಲರ್ ಯಂತ್ರವನ್ನು ಅಡ್ಡವಾಗಿ ನಿಲ್ಲಿಸಿ, ವಾಹನಗಳನ್ನು ಕಡ್ಡಾಯವಾಗಿ ಹದಗೆಟ್ಟ ಮತ್ತು ಅಪಾಯಕಾರಿ ಮಾರ್ಗದ ಮೂಲಕವೇ ಸಂಚರಿಸುವಂತೆ ಮಾಡಲಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

 

ಈ ಅವೈಜ್ಞಾನಿಕ ಕ್ರಮವೇ ಸರಣಿ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದರೂ ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಾಹನ ಸವಾರರ ಅಸಮಾಧಾನಕ್ಕೆ ಕಾರಣವಾಗಿದೆ.