ಮಂಡ್ಯ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಮುತ್ತತ್ತಿ ಪ್ರದೇಶದಲ್ಲಿ ಕಾವೇರಿ ನದಿಯ ಬಳಿ ಫೋಟೋ ತೆಗೆಯುವ ವೇಳೆ ಸಂಭವಿಸಿದ ದುರಂತದಲ್ಲಿ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಘಟನೆ ಬುಧವಾರ ಸಂಜೆ ನಡೆದಿದ್ದು, ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಮೃತರನ್ನು ಶ್ವೇತಾ (38), ಚೈತ್ರ (20), ವಿಜಯಮ್ಮ (50), ಪ್ರಿಯಾಂಕಾ (28) ಹಾಗೂ ವಾಹನ ಚಾಲಕ ಮಹೇಶ್ ಎಂದು ಗುರುತಿಸಲಾಗಿದೆ. ಇವರು ಚನ್ನಪಟ್ಟಣ ಮೂಲದವರಾಗಿದ್ದು, ಕುಟುಂಬ ಸದಸ್ಯರೊಂದಿಗೆ ಮುತ್ತತ್ತಿಯ ಮುತ್ತೆತ್ತರಾಯ ದೇವಾಲಯಕ್ಕೆ ಭೇಟಿ ನೀಡಿದ್ದರು.
ದೇವರ ದರ್ಶನ ಮತ್ತು ಪೂಜೆ ನೆರವೇರಿಸಿದ ಬಳಿಕ ಸಂಜೆ ಸುಮಾರು 4.45ರ ವೇಳೆಗೆ ಕುಟುಂಬದವರು ಕಾವೇರಿ ನದಿ ತಟದತ್ತ ತೆರಳಿದ್ದರು. ಅಲ್ಲಿ ನೆನಪಿಗಾಗಿ ಫೋಟೋ ತೆಗೆಯಲು ನೀರಿನೊಳಗೆ ಇಳಿದ ಸಂದರ್ಭದಲ್ಲಿ ವಿಜಯಮ್ಮ ಅವರು ಆಳವಾದ ನೀರಿನಲ್ಲಿ ಸಿಲುಕಿ ಮುಳುಗತೊಡಗಿದ್ದಾರೆ. ಅವರನ್ನು ರಕ್ಷಿಸಲು ಮುಂದಾದ ಉಳಿದವರೂ ಒಂದರ ಹಿಂದೆ ಒಂದರಂತೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ ಎಂದು ತಿಳಿದುಬಂದಿದೆ.
ಸ್ಥಳದಲ್ಲಿ ಎಚ್ಚರಿಕೆ ಸೂಚನೆಗಳಿದ್ದರೂ ನೀರಿನ ಆಳ ಕಡಿಮೆ ಎಂದು ಭಾವಿಸಿ ನದಿಗೆ ಇಳಿದಿದ್ದರೆಂದು ಹೇಳಲಾಗಿದೆ. ಕುಟುಂಬದ ಮುಖ್ಯಸ್ಥ ರವಿ ಅವರು ಸಹ ನೆರವಿಗೆ ಧಾವಿಸಿದ್ದರೂ, ತಾವೂ ನೀರಿನಲ್ಲಿ ಸಿಲುಕುವ ಪರಿಸ್ಥಿತಿ ಎದುರಿಸಿದ್ದರು. ಈ ವೇಳೆ ಸ್ಥಳೀಯರು ಅವರನ್ನು ರಕ್ಷಿಸಿದ್ದು, ರವಿ ಹಾಗೂ ನಾಲ್ಕು ವರ್ಷದ ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆ ನಡೆಸಿದರು. ಬಳಿಕ ಐವರ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.
ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಕುರಿತು ಮಾಹಿತಿ ಪಡೆದುಕೊಂಡರು.
ಬದುಕುಳಿದ ರವಿ ಹೇಳಿಕೆ
“ಮೊದಲು ಕಬ್ಬಾಳಮ್ಮ ದೇವರ ದರ್ಶನ ಪಡೆದು ಬಳಿಕ ಮುತ್ತತ್ತಿಗೆ ಬಂದಿದ್ದೆವು. ನಂತರ ನದಿಯಲ್ಲಿ ಸ್ನಾನ ಮಾಡಲು ಹೋದಾಗ ಒಬ್ಬರು ಕಾಲು ಜಾರಿ ನೀರಿಗೆ ಬಿದ್ದರು. ಅವರನ್ನು ರಕ್ಷಿಸಲು ಉಳಿದವರೂ ಮುಂದಾದರು. ನಾನು ಸಹ ಅವರನ್ನು ಹೊರಕ್ಕೆ ತರಲು ಪ್ರಯತ್ನಿಸಿದೆ. ಆದರೆ ನಾನೂ ನೀರಿನಲ್ಲಿ ಮುಳುಗುವ ಸ್ಥಿತಿಗೆ ತಲುಪಿದ್ದಾಗ ಸ್ಥಳೀಯರು ರಕ್ಷಿಸಿದರು,” ಎಂದು ರವಿ ತಿಳಿಸಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.




