26 September 2026 |

ಬಂಟ್ವಾಳದಲ್ಲಿ ವ್ಯಕ್ತಿಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ; ಮೂವರು ಬಂಧನ

  • 26 Sep 2026 11:24:40 AM

ಬಂಟ್ವಾಳ: ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆ ಎಂಬಲ್ಲಿ ವ್ಯಕ್ತಿಯೊಬ್ಬರ ಮೇಲೆ ತಲವಾರು ಹಾಗೂ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

 

ಬಂಧಿತರನ್ನು ಅಮ್ಮುಂಜೆ ನಿವಾಸಿ ಪ್ರಶಾಂತ್ (38), ತೆಂಕಬೆಳ್ಳೂರು ನಿವಾಸಿ ರಾಮದಾಸ್ (43) ಹಾಗೂ ಬಡಗಬೆಳ್ಳೂರು ನಿವಾಸಿ ಶಂಕರ (45) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 25ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

 

ಈ ಪ್ರಕರಣದಲ್ಲಿ ತೆಂಕಬೆಳ್ಳೂರು ಗ್ರಾಮದ ಪ್ರಶಾಂತ್ ಬೆಳ್ಳಾಡ್ (41) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದಾರೆ. ಸೆಪ್ಟೆಂಬರ್ 20ರ ಸಂಜೆ ಕಮ್ಮಾಜೆ ಪ್ರದೇಶದಲ್ಲಿದ್ದ ವೇಳೆ, ಪರಿಚಯಸ್ಥರಾದ ಆರೋಪಿಗಳು ಆಟೋರಿಕ್ಷಾದಲ್ಲಿ ಸ್ಥಳಕ್ಕೆ ಬಂದು ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

 

ತಲವಾರು ಮತ್ತು ಕಬ್ಬಿಣದ ರಾಡ್ ಬಳಸಿ ನಡೆಸಿದ ಹಲ್ಲೆಯಿಂದ ಪ್ರಶಾಂತ್ ಬೆಳ್ಳಾಡ್ ಅವರಿಗೆ ಗಂಭೀರ ರಕ್ತಗಾಯಗಳಾಗಿವೆ. ಈ ವೇಳೆ ಸಾರ್ವಜನಿಕರು ಹಾಗೂ ಗಾಯಾಳುವಿನ ಪರಿಚಯಸ್ಥರು ಸ್ಥಳಕ್ಕೆ ಬರುತ್ತಿರುವುದನ್ನು ಗಮನಿಸಿದ ಆರೋಪಿಗಳು, ಮಾರಕಾಸ್ತ್ರಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ.

 

ಗಂಭೀರವಾಗಿ ಗಾಯಗೊಂಡಿದ್ದ ಪ್ರಶಾಂತ್ ಬೆಳ್ಳಾಡ್ ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಪ್ರಕರಣದ ಕುರಿತು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.