ಮಂಗಳೂರು: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದ 22 ವರ್ಷದ ಯುವತಿಯೊಬ್ಬರು ಮಂಗಳೂರಿನ ವಿವಾಹಿತ ಧರ್ಮಗುರುವಿನ ಜೊತೆ ತೆರಳಿರುವ ಘಟನೆ ವರದಿಯಾಗಿದೆ. ಮಗಳು ಮನೆ ಬಿಟ್ಟು ಹೋಗಿದ್ದಾಳೆ ಎಂದು ಪೋಷಕರು ನಾಪತ್ತೆ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಕುಮಟಾದ ಬೆಟಗುಳಿಯ ನಿವಾಸಿ ದಾವುದ್ ಖಾಸಿಂ ಅವರ ಪುತ್ರಿ ಮಗದುಮ್ಮ, ಮಂಗಳೂರಿನ ಅಸೈಗೋಳಿ ನಿವಾಸಿ ಅಶ್ರಫ್ ಸ ಅದಿ ಎಂಬ ಧರ್ಮಗುರುವಿನ ಜೊತೆ ತೆರಳಿದ್ದಾರೆ ಎನ್ನಲಾಗಿದೆ. ಈ ವಿಚಾರ ತಿಳಿದು ಯುವತಿಯ ಪೋಷಕರು ಕೊಣಾಜೆ ಪೊಲೀಸ್ ಠಾಣೆಗೆ ಆಗಮಿಸಿದ್ದರು.
ಪೊಲೀಸ್ ಠಾಣೆಯಲ್ಲಿ ತಂದೆ, ತಾಯಿ, ಸಹೋದರ ಸೇರಿದಂತೆ ಕುಟುಂಬದ ಸದಸ್ಯರು ಯುವತಿಯನ್ನು ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದರು. ಮಗಳು ತಮ್ಮನ್ನು ಬಿಟ್ಟು ಹೋಗುತ್ತಿರುವುದನ್ನು ಕಂಡು ಪೋಷಕರು ಕಣ್ಣೀರಿಟ್ಟಿದ್ದಾರೆ. ಆದರೂ ಯುವತಿ ತನ್ನ ನಿರ್ಧಾರವನ್ನು ಬದಲಿಸಲು ಒಪ್ಪಲಿಲ್ಲ ಎಂದು ತಿಳಿದುಬಂದಿದೆ.
ಯುವತಿಯ ಜೊತೆ ತೆರಳಿರುವ ಧರ್ಮಗುರುವಿಗೆ ಈಗಾಗಲೇ ಮದುವೆಯಾಗಿದ್ದು, ಮಕ್ಕಳೂ ಇದ್ದಾರೆ ಎಂದು ವರದಿಯಾಗಿದೆ. ಯುವತಿ 22 ವರ್ಷದ ವಯಸ್ಕಳಾಗಿರುವುದರಿಂದ, ತನ್ನ ಜೀವನದ ಬಗ್ಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವ ಅವಕಾಶವನ್ನು ಪೊಲೀಸರು ನೀಡಿದ್ದಾರೆ. ಕುಟುಂಬದವರ ಮನವಿಯ ನಡುವೆಯೂ ಯುವತಿ ಧರ್ಮಗುರುವಿನ ಜೊತೆ ತೆರಳಲು ನಿರ್ಧರಿಸಿದ್ದಾಳೆ.





