ಮಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ನಿಂದ ಇಳಿದು ಲಾಡ್ಜ್‌ಗೆ ತೆರಳುತ್ತಿದ್ದ ವ್ಯಕ್ತಿಯನ್ನು ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ಬಲವಂತವಾಗಿ ಅಪಹರಿಸಿ, ಅವರ ಬಳಿಯಿದ್ದ ₹1.15 ಕೋಟಿ ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ದೋಚಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಸುಮಾರು ಎರಡು ಗಂಟೆಗಳ ಕಾಲ ನಗರದ ವಿವಿಧೆಡೆ ಸುತ್ತಾಡಿಸಿದ ದುಷ್ಕರ್ಮಿಗಳು, ಬಳಿಕ ಕಾವೂರು ಸಮೀಪದ ನಿರ್ಜನ ಪ್ರದೇಶದಲ್ಲಿ ಸಂತ್ರಸ್ತನನ್ನು ಬಿಟ್ಟು ಪರಾರಿಯಾಗಿದ್ದಾರೆ.
ದಾವಣಗೆರೆಯಿಂದ ಮಂಗಳೂರಿಗೆ ಭಾರೀ ಪ್ರಮಾಣದ ಹಣವನ್ನು ತಂದಿದ್ದ ಸತ್ಯನಾರಾಯಣ ಎಂಬವರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ಪೊಲೀಸರು ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.
ಸತ್ಯನಾರಾಯಣ ಅವರು ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿ ನಾಗರಾಜ್ ಎಂಬವರ ಬಳಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 23ರಂದು ನಾಗರಾಜ್ ಅವರು ₹1 ಕೋಟಿ 15 ಲಕ್ಷ ನಗದು ಹಣವನ್ನು ಎರಡು ಬ್ಯಾಗ್‌ಗಳಲ್ಲಿ ತುಂಬಿ ಸತ್ಯನಾರಾಯಣ ಅವರಿಗೆ ನೀಡಿದ್ದರು. ಈ ಹಣವನ್ನು ಮಂಗಳೂರಿಗೆ ತೆಗೆದುಕೊಂಡು ಬಂದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಲಾಡ್ಜ್‌ನಲ್ಲಿ ಉಳಿದುಕೊಳ್ಳುವಂತೆ ಸೂಚಿಸಿದ್ದರು. ತಾವು ಕೂಡ ಅಲ್ಲಿಗೆ ಬರುವುದಾಗಿ ತಿಳಿಸಿದ್ದರು.
ಮಾಲೀಕರ ಸೂಚನೆಯಂತೆ ಸತ್ಯನಾರಾಯಣ ಅವರು ಅಕ್ಟೋಬರ್ 27ರಂದು ರಾತ್ರಿ 10 ಗಂಟೆಗೆ ದಾವಣಗೆರೆಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಆರಂಭಿಸಿದ್ದರು. ಅಕ್ಟೋಬರ್ 28ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ರಾಮಕೃಷ್ಣ ಹಾಸ್ಟೆಲ್ ಸಮೀಪ ಬಸ್‌ನಿಂದ ಇಳಿದಿದ್ದರು.
ಬಳಿಕ ತಿಂಡಿ ಸೇವಿಸಲು ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಪ್ಪು ಬಣ್ಣದ ಕಾರಿನಲ್ಲಿ ಬಂದ ನಾಲ್ವರು ಅಪರಿಚಿತರು ಅವರನ್ನು ಸುತ್ತುವರಿದಿದ್ದಾರೆ. ಮುಖಕ್ಕೆ ಮಪ್ಲರ್ ಧರಿಸಿದ್ದ ದುಷ್ಕರ್ಮಿಗಳು ಸತ್ಯನಾರಾಯಣ ಅವರನ್ನು ಬಲವಂತವಾಗಿ ಕಾರಿನೊಳಗೆ ಎಳೆದುಕೊಂಡು ಅಪಹರಿಸಿದ್ದಾರೆ.
ನಂತರ ಸುಮಾರು ಎರಡು ಗಂಟೆಗಳ ಕಾಲ ಮಂಗಳೂರಿನ ವಿವಿಧ ಪ್ರದೇಶಗಳಲ್ಲಿ ಕಾರಿನಲ್ಲಿ ಸುತ್ತಾಡಿಸಿ, ಅವರ ಬಳಿಯಿದ್ದ ಹಣದ ಎರಡು ಬ್ಯಾಗ್‌ಗಳು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ಕಸಿದುಕೊಂಡಿದ್ದಾರೆ. ಬಳಿಕ ಬೆಳಗ್ಗೆ 8 ಗಂಟೆ ಸುಮಾರಿಗೆ ಕಾವೂರು ಬಸ್ ನಿಲ್ದಾಣದ ಸಮೀಪದ ನಿರ್ಜನ ಗುಡ್ಡದ ಬಳಿ ಸತ್ಯನಾರಾಯಣ ಅವರನ್ನು ಕಾರಿನಿಂದ ಕೆಳಗಿಳಿಸಿ ಪರಾರಿಯಾಗಿದ್ದಾರೆ.
ಅಲ್ಲದೆ, ಈ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಜೀವಂತವಾಗಿ ಬಿಡುವುದಿಲ್ಲ, ಕೊಲೆ ಮಾಡುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ದುಷ್ಕರ್ಮಿಗಳು ತೆರಳಿದ ಬಳಿಕ ಸಂತ್ರಸ್ತ ಸತ್ಯನಾರಾಯಣ ಅವರು ಪೊಲೀಸ್ ಠಾಣೆಗೆ ತೆರಳಿ ನಡೆದ ಘಟನೆಯ ಕುರಿತು ದೂರು ದಾಖಲಿಸಿದ್ದಾರೆ.





