ಬೆಂಗಳೂರು: ಕರ್ನಾಟಕದಾದ್ಯಂತ ಪಡಿತರ ಅಕ್ಕಿ ಮತ್ತು ಆಹಾರ ಧಾನ್ಯಗಳ ಕಳ್ಳಸಾಗಣೆ ತಡೆಯಲು ಅಧಿಕಾರಿಗಳು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಅಕ್ರಮಗಳು ಪತ್ತೆಯಾಗಿವೆ. ಕಳೆದ ಮೂರು ತಿಂಗಳಲ್ಲಿ ಒಟ್ಟು 17.78 ಲಕ್ಷ ಕೆಜಿ ಪಡಿತರ ಅಕ್ಕಿ ಸೇರಿದಂತೆ ವಿವಿಧ ಆಹಾರ ಧಾನ್ಯಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧೆಡೆ 238 ಪ್ರಕರಣಗಳನ್ನು ದಾಖಲಿಸಲಾಗಿದ್ದು, 215 ಆರೋಪಿಗಳನ್ನು ಬಂಧಿಸಲಾಗಿದೆ. ಕಳ್ಳಸಾಗಣೆಗೆ ಬಳಸುತ್ತಿದ್ದರೆಂದು ಶಂಕಿಸಲಾದ 156 ವಾಹನಗಳನ್ನು ಕೂಡ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಇದರ ಜೊತೆಗೆ ಅಕ್ರಮವಾಗಿ ಸಂಗ್ರಹಿಸಿದ್ದ ಅಥವಾ ಸಾಗಿಸುತ್ತಿದ್ದ 14,250 ಲೀಟರ್ ಪೆಟ್ರೋಲ್ ಹಾಗೂ 1,492 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯಲ್ಲಿ ಜಪ್ತಿ ಮಾಡಲಾದ ಅಕ್ಕಿ, ಆಹಾರ ಧಾನ್ಯಗಳು, ವಾಹನಗಳು ಸೇರಿದಂತೆ ಎಲ್ಲ ವಸ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು ₹10 ಕೋಟಿ ಎಂದು ತಿಳಿದುಬಂದಿದೆ.





