30 October 2026 |

ರಫೇಲ್ ಯುದ್ಧ ವಿಮಾನದ ಕಾರ್ಯಾಚರಣಾ ಪೈಲಟ್ ಆಗಿ ಸಾಧನೆ: ದಕ್ಷಿಣ ಕನ್ನಡದ ಪ್ರಜ್ವಲ್ ಆರ್. ಶೆಟ್ಟಿಗೆ ಜಿಲ್ಲೆಯ ಹೆಮ್ಮೆ

  • 30 Oct 2026 04:13:10 PM

ಮಂಗಳೂರು: ಕಠಿಣ ಪರಿಶ್ರಮ, ಶೈಕ್ಷಣಿಕ ಸಾಧನೆ ಮತ್ತು ದೇಶಸೇವೆಯ ಗುರಿಯನ್ನು ಮುಂದಿಟ್ಟುಕೊಂಡು ಸಾಗಿದ ದಕ್ಷಿಣ ಕನ್ನಡ ಜಿಲ್ಲೆಯ ಯುವಕ ಫೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ ಅವರು ಭಾರತೀಯ ವಾಯುಸೇನೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ದೇಶದ ಅತ್ಯಾಧುನಿಕ ಯುದ್ಧ ವಿಮಾನಗಳಲ್ಲಿ ಒಂದಾದ ರಫೇಲ್‌ನ ಸಂಪೂರ್ಣ ಕಾರ್ಯಾಚರಣಾ ಪೈಲಟ್ ಆಗಿ ಅವರು ಹೊರಹೊಮ್ಮಿದ್ದು, ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

 

ಪಿಯುಸಿ ಶಿಕ್ಷಣ ಮುಗಿಸಿದ ಬಳಿಕವೇ ತಮ್ಮ ಸಾಧನೆಯ ಪಯಣ ಆರಂಭಿಸಿದ ಪ್ರಜ್ವಲ್, ಪುಣೆಯ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್‌ಡಿಎ) ಪ್ರವೇಶಕ್ಕಾಗಿ ನಡೆದ ಯುಪಿಎಸ್‌ಸಿ ಪರೀಕ್ಷೆಯಲ್ಲಿ 42ನೇ ರ್ಯಾಂಕ್ ಪಡೆದುಕೊಂಡಿದ್ದರು. ಬಳಿಕ ಎನ್‌ಡಿಎಯಲ್ಲಿ ಮೂರು ವರ್ಷಗಳ ಕಠಿಣ ಮಿಲಿಟರಿ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದರು. ಈ ಅವಧಿಯಲ್ಲಿ ಸೂಪರ್ ಡಿಮೋನಾ ವಿಮಾನದ ಮೂಲಕ ಪ್ರಾಥಮಿಕ ಹಾರಾಟದ ಅನುಭವವನ್ನೂ ಪಡೆದುಕೊಂಡರು.

 

ಮುಂದೆ ಹೈದರಾಬಾದ್‌ನ ಏರ್ ಫೋರ್ಸ್ ಅಕಾಡೆಮಿಗೆ ಆಯ್ಕೆಯಾದ ಅವರು, ಒಂದು ವರ್ಷದ ಹಾರಾಟ ತರಬೇತಿ ಪೂರ್ಣಗೊಳಿಸಿದರು. ಪಿಲಾಟಸ್ ಮತ್ತು ಕಿರಣ್ ವಿಮಾನಗಳಲ್ಲಿ ತರಬೇತಿ ಪಡೆದ ಪ್ರಜ್ವಲ್, ವಾಯುಯಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸಿದರು. ಇದೇ ವೇಳೆ ಬಿ.ಟೆಕ್ ಪದವಿಯನ್ನೂ ಪಡೆದುಕೊಂಡರು.

 

2022ರ ಡಿಸೆಂಬರ್‌ನಲ್ಲಿ ಭಾರತೀಯ ವಾಯುಸೇನೆಯ ಫೈಟರ್ ಸ್ಟ್ರೀಮ್‌ಗೆ ನಿಯೋಜನೆಗೊಂಡ ಪ್ರಜ್ವಲ್ ಅವರಿಗೆ ಮುಂದಿನ ಹಂತದ ತರಬೇತಿಗಾಗಿ ಪಶ್ಚಿಮ ಬಂಗಾಳದ ಕಲೈಕುಂಡಕ್ಕೆ ತೆರಳುವ ಅವಕಾಶ ದೊರೆಯಿತು. ಅಲ್ಲಿ ಹಾಕ್ ಯುದ್ಧ ತರಬೇತಿ ವಿಮಾನದ ಮೂಲಕ ಒಂದು ವರ್ಷದ ಮೂಲಭೂತ ತರಬೇತಿ ಪಡೆದರು. ಈ ಹಂತದಲ್ಲಿಯೂ ವಾಯುಯಾನ ವಿಷಯಗಳಲ್ಲಿ ಮೊದಲ ಸ್ಥಾನ ಗಳಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.

 

ನಂತರ ದೇಶದ ಅತ್ಯಾಧುನಿಕ ಬಹುಪಾತ್ರದ ಯುದ್ಧ ವಿಮಾನವಾದ ರಫೇಲ್ ಹಾರಾಟಕ್ಕೆ ಅವರು ಆಯ್ಕೆಯಾದರು. ಹರಿಯಾಣದ ಅಂಬಾಲಾದಲ್ಲಿರುವ ಭಾರತೀಯ ವಾಯುಸೇನೆಯ 17ನೇ ಸ್ಕ್ಯಾಡ್ರನ್ 'ಗೋಲ್ಡನ್ ಆರೋಸ್'ಗೆ ನಿಯೋಜನೆಗೊಂಡ ಪ್ರಜ್ವಲ್, ರಫೇಲ್ ವಿಮಾನದ ಕನ್ವರ್ಶನ್ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದರು. ಇದರೊಂದಿಗೆ ರಫೇಲ್ ಯುದ್ಧ ವಿಮಾನದ ಸಂಪೂರ್ಣ ಕಾರ್ಯಾಚರಣಾ ಪೈಲಟ್ ಆಗಿ ದೇಶದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

 

ಇತ್ತೀಚೆಗೆ ಅಕ್ಟೋಬರ್ 25ರಂದು ವಾರಣಾಸಿಯಲ್ಲಿ ಆಯೋಜಿಸಲಾಗಿದ್ದ 'ವಿಂಗ್ಸ್ ಓವರ್ ಗಂಗಾ' ವೈಮಾನಿಕ ಪ್ರದರ್ಶನದಲ್ಲಿಯೂ ಪ್ರಜ್ವಲ್ ತಮ್ಮ ಹಾರಾಟದ ಕೌಶಲವನ್ನು ಪ್ರದರ್ಶಿಸಿದರು. ಭಾರತೀಯ ವಾಯುಸೇನೆಯ 94ನೇ ವರ್ಷಾಚರಣೆಯ ಅಂಗವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಮೂರು ರಫೇಲ್ ವಿಮಾನಗಳು ಒಳಗೊಂಡ 'ನೀಲಕಂಠ' ಫಾರ್ಮೇಷನ್ ಗಮನ ಸೆಳೆಯಿತು. ಈ ತಂಡದಲ್ಲಿ ಮಧ್ಯದ ಪ್ರಮುಖ ನಾಯಕತ್ವದ ಸ್ಥಾನವನ್ನು ವಹಿಸಿಕೊಂಡು ಪ್ರಜ್ವಲ್ ವಿಮಾನ ಹಾರಾಟ ನಡೆಸಿದ್ದು, ಅವರ ವೃತ್ತಿಜೀವನದ ಮತ್ತೊಂದು ಮಹತ್ವದ ಸಾಧನೆಯಾಯಿತು.

 

ಪ್ರಜ್ವಲ್ ಆರ್. ಶೆಟ್ಟಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಹರೇಕಳ ಉಳಿದೊಟ್ಟು ಗ್ರಾಮದ ರಮೇಶ್ ಶೆಟ್ಟಿ ಮತ್ತು ಕೋಡೆತ್ತೂರು ಮೂಡುದೇವಸ್ಯದ ಸೀತಾ ಆರ್. ಶೆಟ್ಟಿ ದಂಪತಿಯ ಪುತ್ರ.

 

ಪಿಯುಸಿ ನಂತರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 42ನೇ ರ್ಯಾಂಕ್ ಪಡೆಯುವ ಮೂಲಕ ಆರಂಭವಾದ ಅವರ ಸಾಧನೆಯ ಹಾದಿ, ಇಂದು ದೇಶದ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನದ ಕಾರ್ಯಾಚರಣಾ ಪೈಲಟ್ ಎಂಬ ಗೌರವದ ಹಂತಕ್ಕೆ ತಲುಪಿದೆ. ಅವರ ಈ ಸಾಧನೆಯಿಂದ ಕುಟುಂಬದವರು ಸಂತಸಗೊಂಡಿದ್ದು, ಇಡೀ ದಕ್ಷಿಣ ಕನ್ನಡ ಜಿಲ್ಲೆಗೂ ಹೆಮ್ಮೆಯ ಕ್ಷಣವಾಗಿದೆ.