ಹವಾಮಾನ ವೈಪರೀತ್ಯದಿಂದ ಕಂಗೆಟ್ಟಿದ್ದ ದಕ್ಷಿಣ ಕನ್ನಡದ ಅಡಿಕೆ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಬಂದಿದೆ. ಇದೀಗ ಹೊಸ ಅಡಿಕೆ ದರವು ಕೆಜಿಗೆ ರೂ. 500 ತಲುಪಿದ್ದು ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಅಡಿಕೆ ಫಸಲು ಕಡಿಮೆ ಇದ್ದ ರೈತರ ಮೊಗದಲ್ಲಿ ಸಂತಸ ತಂದಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಿನಿಂದ ಯಾವುದೇ ಬದಲಾವಣೆ ಕಾಣದ ಅಡಿಕೆ ಬೆಲೆ, ಈ ವರ್ಷ ಮಾರ್ಚ್ ತಿಂಗಳ ನಂತರ ಚೇತರಿಕೆ ಕಂಡಿತ್ತು.
ಕಳೆದ ಡಿಸೆಂಬರ್ ತಿಂಗಳಲ್ಲಿ ಸುಮಾರು ಕೆಜಿಗೆ ರೂ. 350 ರಷ್ಟಿದ್ದ ಅಡಿಕೆ ಬೆಲೆ ಈಗ ಖಾಸಗಿ ಮಾರುಕಟ್ಟೆಯಲ್ಲಿ ರೂ. 500 ರ ವರೆಗೆ ತಲುಪಿದೆ. ಕ್ಯಾಂಪ್ಕೋ ಸಂಸ್ಥೆಗಳು ಕೆಜಿಗೆ ಗರಿಷ್ಠ ರೂ. 495 ನೀಡುತ್ತಿದೆ ಎಂದು ತಿಳಿದು ಬಂದಿದೆ. ಖಾಸಗಿ ಮಾರುಕಟ್ಟೆಗಳಲ್ಲಿ ಡಿಮ್ಯಾಂಡ್ ಹೆಚ್ಚಾಗಿದ್ದು, ಇನ್ನು ಬೆಲೆ ಏರುವ ನೀರಿಕ್ಷೆ ಇದೆ ಎಂದು ತಿಳಿದು ಬಂದಿದೆ.
ಹಳೆ ಅಡಿಕೆಗಳು ಕೆಜಿಗೆ ರೂ. 510 ರಿಂದ ರೂ. 520 ರವರೆಗೆ ಮಾರಾಟವಾಗುತ್ತಿದೆ. ಈ ವರ್ಷ ನಾನಾ ಕಾರಣಗಳಿಂದ ಅಡಿಕೆ ಬೆಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ ಮತ್ತು ಅಡಿಕೆ ಕೃಷಿ ತಜ್ಞರ ಪ್ರಕಾರ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದ್ದಾರೆ.
ಮೊದಲನೆಯದಾಗಿ, ಈ ವರ್ಷ ಹವಾಮಾನ ವೈಪರೀತ್ಯದಿಂದ ಫಸಲು ಕಡಿಮೆ ಆಗಿದ್ದರ ಪರಿಣಾಮ, ಹೊರ ರಾಜ್ಯಗಳಿಗೆ ಪೂರ್ಣ ಪ್ರಮಾಣದ ವಿತರಣೆ ಆಗುತ್ತಿಲ್ಲ. ಇದು ಕೂಡ ಬೆಲೆ ಏರಿಕೆಗೆ ಒಂದು ಮುಖ್ಯ ಕಾರಣವಾಗಿದೆ.
ಎರಡನೆಯದಾಗಿ, ವಿದೇಶದಿಂದ ಆಮದು ಆಗುತ್ತಿದ್ದ ಅಡಿಕೆ ಈ ವರ್ಷ ಬರದೇ ಇರುವುದು ಕೂಡ ಬೆಲೆ ಏರಿಕೆಗೆ ಮುಖ್ಯ ಕಾರಣವಾಗಿದೆ. ಈ ಹಿಂದೆ ವಿದೇಶದಿಂದ ಕಂಟೇನರ್ ಗಟ್ಟಲೆ ಅಡಿಕೆ ನಮ್ಮ ದೇಶಕ್ಕೆ ಬರುತ್ತಿದ್ದರ ಪರಿಣಾಮ ಬೆಲೆಯಲ್ಲಿ ಯಾವುದೇ ಏರಿಕೆ ಕಾಣುತ್ತಿರಲಿಲ್ಲ. ಈ ಬಗ್ಗೆ ದಕ್ಷಿಣ ಕನ್ನಡ ಸಂಸದರಾದ ಕ್ಯಾ. ಬೃಜೇಶ್ ಚೌಟ ಕೇಂದ್ರ ಸರಕಾರಕ್ಕೆ ಪತ್ರವನ್ನು ಕೂಡ ಬರೆದು ಹೊರ ದೇಶಗಳಿಂದ ಆಮದು ಮಾಡುವ ಅಡಿಕೆಗಳಿಗೆ ಬ್ರೇಕ್ ಹಾಕಬೇಕೆಂದು ಮನವಿ ಕೂಡ ಮಾಡಿಕೊಂಡಿದ್ದರು. ಆದರೆ, ಅದರ ಬಗ್ಗೆ ಯಾವ ರೀತಿಯ ಕ್ರಮ ಸರಕಾರ ಕೈಗೊಳ್ಳಲಿದೆ ಎಂಬುವುದು ತಿಳಿದು ಬಂದಿಲ್ಲ.
ಮೂರನೆಯದಾಗಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಪರಿಸ್ಥಿತಿ ಇದ್ದ ಸಂದರ್ಭದಲ್ಲಿ ಮಾರುಕಟ್ಟೆ ಸ್ಥಗಿತವಾಗಿತ್ತು. ಆ ಸಂದರ್ಭದಲ್ಲಿ ಕೆಜಿಗೆ 20-30 ರೂ. ನಷ್ಟು ಬೆಲೆ ಕುಸಿತ ಕೂಡ ಆಗಿತ್ತು. ಆದರೆ ಈಗ ಆ ಭೀತಿ ತಿಳಿಯಾಗಿದ್ದು, ಮಾರ್ಕೆಟ್ ಮತ್ತೊಮ್ಮೆ ಚೇತರಿಸಿಕೊಂಡಿದೆ.
ಸದ್ಯಕ್ಕೆ ಕರಾವಳಿಯ ಅಡಿಕೆ ಬೆಳೆಗಾರರ ಮೊಗದಲ್ಲಿ ಸಂತಸ ತರುವ ಅಡಿಕೆ ಬೆಲೆ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿದೆ. ಅಡಿಕೆ ತೋಟ ನಿರ್ವಹಿಸಲು ಬೇಕಾದ ಖರ್ಚು ವೆಚ್ಚಗಳನ್ನು ಪರಿಗಣಿಸಿದರೆ ತುಂಬಾ ಲಾಭವೇನು ದೊರೆಯದಿದ್ದರೂ, ಜೀವನ ನಡೆಸಲು ಯಾವುದೇ ಸಮಸ್ಯೆ ಇಲ್ಲಾ ಎನ್ನುತ್ತಾರೆ ರೈತರು. ದೊಡ್ಡ ಮಟ್ಟದ ಅಡಿಕೆ ಬೆಳೆಗಾರರಿಗೆ ಸದ್ಯದ ಬೆಲೆ ವರದಾನವಾಗಿದೆ. ಸಾರ್ವಕಾಲಿಕ ದಾಖಲೆ ಮಾಡಿದ ಅಡಿಕೆ ಬೆಲೆ ಇದೇ ರೀತಿಯಲ್ಲಿ ಮುಂದುವರಿಯಲಿ ಎನ್ನುವುದು ಅಡಿಕೆ ಕೃಷಿಕರ ಬಯಕೆ.